
ಆನೇಕಲ್: ದೀಪಾವಳಿ ಹಬ್ಬಕ್ಕೂ ಮೊದಲೇ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ ಎರಡು ರಾಜ್ಯದ ಜನರ ಮನಸನ್ನು ಕದಡಿಸಿದೆ. ಲಾರಿಯಲ್ಲಿದ್ದ ಪಟಾಕಿಗಳನ್ನು ಕೆಳಗಿಳಿಸುತ್ತಿರುವ ವೇಳೆ ಬೆಂಕಿ ಹೊತ್ತಿಕೊಂಡು 14 ಜನರು ಸಜೀವವಾಗಿ ದಹನವಾಗಿದ್ದಾರೆ. ಅವರ ಕುಟುಂಬಸ್ಥರ ಸಂಕಷ್ಟ ಕರುಳು ಚುರುಕು ಎನ್ನುವಂತಿದೆ. ಈ ದುರ್ಘಟನೆಯಲ್ಲಿ ಮಡಿದ 14 ಜನರ ಪೈಕಿ 8 ವಿದ್ಯಾರ್ಥಿಗಳು ಒಂದೇ ಊರಿನವರು ಎಂದು ತಿಳಿದಿದ್ದು, ಕಾಲೇಜ್ ಫೀಸ್ಗೆ ಹಣ ಹೊಂದಿಸಲು ಕೆಲಸಕ್ಕೆ ಬಂದಿದ್ದವರು ಕಣ್ಣು ಮುಚ್ಚಿದ್ದಾರೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಅರೂರ್ ತಾಲೂಕಿನ ಟಿ.ಅಮ್ಮಾಪೇಟೈ ಎನ್ನುವ ಗ್ರಾಮದ 8 ವಿದ್ಯಾರ್ಥಿಗಳಾದ ಆದಿಕೇಶವನ್ (17), ಗಿರಿ (17), ವೇಡಪ್ಪನ್ (22), ಆಕಾಶ್ (17), ವಿಜಯ ರಾಘವನ್ (19), ವೆಳಂಬರದಿ (20), ವಿನೋದ್ (18), ಮುನಿವೇಲ್ (19) ದುರಂತದಲ್ಲಿ ಮೃತಪಟ್ಟವರು. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದ ಕಾರಣ ತಮ್ಮ ಕಾಲೇಜು ಫೀಸ್ ಅನ್ನು ತಮ್ಮ ದುಡಿಮೆಯಲ್ಲೇ ಕಟ್ಟಬೇಕು ಎನ್ನುವ ಉದ್ದೇಶದಿಂದ ಪಟಾಕಿ ಗೋಡೌನ್ಗೆ ಕೆಲಸಕ್ಕೆ ಬಂದಿದ್ದರು ಸಜೀವವಾಗಿ ದಹನವಾಗಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮಿಳುನಾಡಿನಿಂದ ಬೆಂಗಳೂರಿನ ಅತ್ತಿಬೆಲೆಯಲ್ಲಿನ ಪಟಾಕಿ ಗೋಡೌನ್ಗೆ ಕೆಲಸಕ್ಕೆ ಬಂದಿದ್ದರು. ಈ ವೇಳೆ ಗೋಡೌನ್ಗೆ ಲಾರಿಯಿಂದ ಪಾಟಾಕಿಗಳನ್ನ ಅನ್ಲೋಡ್ ಮಾಡುವಾಗ ಬೆಂಕಿ ಕಾಣಿಸಿ ಭಾರೀ ಸ್ಫೋಟ ಸಂಭವಿಸಿದೆ. ಇದರಿಂದ ಒಟ್ಟು 14 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲರೂ 22 ವರ್ಷದೊಳಗಿನವರು. ಇದರಲ್ಲಿ ಒಂದೇ ಗ್ರಾಮದ 7 ವಿದ್ಯಾರ್ಥಿಗಳು ಬಲಿಯಾಗಿರುವುದು ದೊಡ್ಡ ದುರಂತವೇ ಸರಿ.

ಮೃತ ವಿದ್ಯಾರ್ಥಿಗಳ ಸ್ವಗ್ರಾಮ ಟಿ.ಅಮ್ಮಾಪೇಟೈನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಕೆಲಸಕ್ಕೆ ಕಳುಹಿಸಿ ತಪ್ಪು ಮಾಡಿದ್ದೇವು ಎಂದು ಸಂಬಂಧಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯ ಬಳಿಕ ಸ್ವಗ್ರಾಮಕ್ಕೆ ಮೃತದೇಹಗಳನ್ನು ರವಾನೆ ಮಾಡಲಾಗುತ್ತದೆ.

