
ದೇಶದ ಮೇಲೆ ಅತ್ಯಂತ ಘಾತಕ ರಾಕೆಟ್ ದಾಳಿ ಮಾಡಿದ ಬೆನ್ನಲ್ಲಿಯೇ ಇಸ್ರೇಲ್, ತನ್ನ ಏರ್‌ಫೋರ್ಸ್ ಮೂಲಕ ಭಾರಿ ಬಾಂಬ್ ದಾಳಿ ನಡೆಸಿದೆ. ಅಲ್‌ಜಜೀರಾ ವರದಿಯ ಪ್ರಕಾರ, ಇಸ್ರೇಲ್ ಏರ್‌ಫೋರ್ಸ್ ದಾಳಿಯಲ್ಲಿ ಈವರೆಗೂ 160 ಪ್ಯಾಲಿಸ್ತೇನಿಯನ್ನರು ಮೃತಪಟ್ಟಿದ್ದಾರೆ.

ನವದೆಹಲಿ (ಅ.7): ಹಮಾಸ್‌ನ ದಾಳಿಗೆ ಪ್ರತಿಯಾಗಿ ತನ್ನ ಸೇನಾಪಡೆಗಳ ಮೂಲಕ ಇಸ್ರೇಲ್ ದಾಳಿ ಆರಂಭಿಸಿದೆ. ಇಸ್ರೇಲ್‌ನ ಏರ್‌ಫೋರ್ಸ್ ದಾಳಿಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಗಾಜಾಪಟ್ಟಿಯಲ್ಲಿರುವ ಪ್ಯಾಲಿಸ್ತೇನ್ ಹಾಗೂ ಹಮಾಸ್‌ಗೆ ಸೇರಿದ 17 ಮಿಲಿಟರಿ ಕಾಂಪೌಂಡ್‌ಗಳು ಮತ್ತು 4 ಸೇನಾ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದಾಗಿ ಇಸ್ರೇಲ್ ಏರ್‌ಫೋರ್ಸ್ ಹೇಳಿದೆ. ಕತಾರ್ ಸರ್ಕಾರದ ಮಾಲೀಕತ್ವದಲ್ಲಿರುವ ಅಲ್‌ಜಜೀರಾ ಕೂಡ ಇದನ್ನು ಖಚಿತಪಡಿಸಿದೆ. ಇಸ್ರೇಲ್‌ನ ದಾಳಿಯಿಂದ ಇಲ್ಲಿಯವರೆಗೂ 160 ಪ್ಯಾಲಿಸ್ತೇನಿಯನ್ನರು ಸಾವು ಕಂಡಿದ್ದಾರೆ. 1 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಆದರೆ, ಇಸ್ರೇಲ್ ಮಾತ್ರ ಇವರೆಗೂ ಎದುರಾಳಿ ಪಡೆಗಳಲ್ಲಿ ಆಗಿರಬಹುದಾದ ಸಾವಿನ ಬಗ್ಗೆ ಅಂದಾಜು ನೀಡಿಲ್ಲ.ಇನ್ನು ಹಮಾಸ್ ಹಾರಿಸಿದ 7 ಸಾವಿರ ರಾಕೆಟ್‌ಗಳಿಂದ ಇದುವರೆಗೆ 40 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ ಮತ್ತು 750 ಜನರು ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯಿಂದ ದಾಳಿಯ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿದೆ. ಸಚಿವ ಸಂಪುಟದ ತುರ್ತು ಸಭೆಯ ನಂತರ, ಇದು ಯುದ್ಧ ಮತ್ತು ನಾವು ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದು ಹೇಳಿದ್ದರು. ನಮ್ಮ ಮೇಲೆ ಮಾಡಿದ ದಾಳಿಗೆ ಶತ್ರುಗಳು ಖಂಡಿತಾ ಬೆಲೆ ತೆರಲೇಬೇಕು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಇಸ್ರೇಲ್‌ನಲ್ಲಿ ಹದಗೆಟ್ಟ ಪರಿಸ್ಥಿತಿಯ ನಡುವೆ, ಭಾರತೀಯ ರಾಯಭಾರ ಕಚೇರಿ ಅಲ್ಲಿರುವ ತನ್ನ ನಾಗರಿಕರಿಗೆ ಸಲಹೆಯನ್ನು ನೀಡಿದೆ. ಜಾಗರೂಕರಾಗಿ ಮತ್ತು ಸುರಕ್ಷಿತವಾಗಿರಲು ಅವರನ್ನು ಕೇಳಲಾಗಿದೆ. ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜನರೊಂದಿಗೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಸ್ರೇಲಿ ಪ್ರದೇಶದ ಮೇಲೆ ಹಮಾಸ್‌ನ ಅನಿರೀಕ್ಷಿತ ಆಕ್ರಮಣಕ್ಕೆ ಪ್ರತೀಕಾರವಾಗಿ ಇಸ್ರೇಲ್ ದಾಳಿಯನ್ನು ಪ್ರಾರಂಭಿಸಿದ ನಂತರ, ಗಾಜಾದಲ್ಲಿ ಕನಿಷ್ಠ 160 ಪ್ಯಾಲೆಸ್ಟೀನಿಯನ್ನರು ಸಾವು ಕಂಡಿದ್ದು, 1,000 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಪ್ರಾಧಿಕಾರ ತಿಳಿಸಿದೆ.

ಇನ್ನೊಂದೆಡೆ ದಾಳಿಯಲ್ಲಿ ಇಸ್ರೇಲ್ ಪರವಾಗಿ ನಿಂತಿರುವ ಅಮೆರಿಕಾ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ಬೆಂಬಲ ನೀಡುವುದಾಗಿ ತಿಳಿಸಿದೆ. ಇದರ ನಡುವೆ ಇಂಗ್ಲೆಂಡ್, ಯುರೋಪಿಯನ್ ಯೂನಿಯನ್ ಹಾಗೂ ಭಾರತ, ಹಮಾಸ್‌ನ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.