
ವಿಮಾನದಲ್ಲಿ ಬಂದು ರೈಲಿನಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡಿ ವಾಪಸ್ ಫ್ಲೈಟ್ನಲ್ಲೇ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹೈಟೆಕ್ ಖದೀಮರು ಮಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಒಂದು ಕಳ್ಳತನ ಪ್ರಕರಣದಲ್ಲಿ ರೈಲಿನಲ್ಲಿ ಅನುಮಾನದ ಮೇರೆಗೆ ಇಬ್ಬರು ಯುವಕರನ್ನು ಮಂಗಳೂರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಹೈಟೆಕ್ ಕಳ್ಳರ ಕರಾಮತ್ತು ಬಟಾಬಯಲಾಗಿದೆ.

Edited By Ashraf Kammaje ::Updated on: Oct 05, 2023 | 12:53 PM
ಮಂಗಳೂರು, (ಅಕ್ಟೋಬರ್ 05): ವಿಮಾನದಲ್ಲಿ (Flight) ಬಂದು ರೈಲಿನಲ್ಲಿ ಪ್ರಯಾಣಿಕರ (Train Passengers) ಹಣ, ಚಿನ್ನ ಕದ್ದು ವಾಪಸ್ ವಿಮಾನದಲ್ಲೇ ಪರಾರಿಯಾಗುತ್ತಿದ್ದ ಅಂತಾರಾಜ್ಯ ಹೈಟೆಕ್ ದರೋಡೆಕೋರರು ಕೊನೆಗೂ ಮಂಗಳೂರು ರೈಲ್ವೆ ಪೊಲೀಸರ (Mangaluru Railway Police) ಬಲೆಗೆ ಬಿದ್ದಿದ್ದಾರೆ. ಯುಪಿ ಮೂಲದ ಅಭಯರಾಜ್ (26), ಹರಿಶಂಕರ್ ಗಿರಿ(25) ಬಂಧತ ಖದೀಮರು. ಸೆಪ್ಟೆಂಬರ್ 28ರಂದು ಮಂಗಳೂರು-ಸುರತ್ಕಲ್ ಮಾರ್ಗದ ರೈಲಿನಲ್ಲಿ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಮೇಲೆ ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಹೈಟೆಕ್ ಕಳ್ಳತನದ ದಂಧೆ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 28ರಂದು ಮಂಗಳೂರು- ಸುರತ್ಕಲ್ ಮಧ್ಯೆ ರೈಲಿನಲ್ಲಿ ಪ್ರಯಾಣಿಕರ ಸುಲಿಗೆ ನಡೆದಿತ್ತು. ಬಳಿಕ ಮಂಗಳೂರು ರೈಲ್ವೆ ಪೊಲೀಸರು, ಸಂಶಯದಿಂದ ರೈಲಿನಲ್ಲಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಕೃತ್ಯ ಬಟಾಬಯಲಾಗಿದೆ. ರಾತ್ರಿ ವೇಳೆ ಕೊಂಕಣ ರೈಲ್ವೇಯಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಕೇರಳ, ಕರ್ನಾಟಕದ ರೈಲಿನಲ್ಲಿ ಪ್ರಯಾಣಿಕರ ಚಿನ್ನ ಕದ್ದು ವಿಮಾನದಲ್ಲಿ ಪರಾರಿಯಾಗುತ್ತಿದ್ದರು. ಸದ್ಯ ಇದೀಗ ಹೈಟೆಕ್ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದು, ಆರೋಪಿಗಳಿಂದ ಒಟ್ಟು 125 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯವರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಮಂಗಳೂರು ರೈಲ್ವೆ ಪೊಲಿಸರು ಇನ್ನಷ್ಟು ತನಿಖೆ ನಡೆಸಿದ್ದಾರೆ.

