
ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರೋದಕ್ಕೆ ಮುನಿಸಿಕೊಂಡಿರುವ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಇವತ್ತು ಸುದ್ದಿಗೋಷ್ಟಿ ನಡೆಸಿ.. ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಲ ಬರಲಿ, ಎಲ್ಲವನ್ನೂ ಚರ್ಚೆ ಮಾಡೋಣ. ನಮ್ಮ ಸಿದ್ಧಾಂತಗಳನ್ನು ಬಿಟ್ಟು ಯಾವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕೆಲವೊಂದು ವಿಚಾರಗಳು ಪದ್ಮನಾಭನಗರದಲ್ಲಿ (ದೇವೇಗೌಡರ ನಿವಾಸ) ನಡೆದಿದ್ದವು. ಕೆಲವೊಂದು ನನ್ನ ನಿರ್ಧಾರ ಆಗಿತ್ತು. ಹೀಗಾಗಿ 19 ಸ್ಥಾನ ಗೆಲ್ಲಲು ಸಾಧ್ಯವಾಯಿತು. ಇಲ್ಲದಿದ್ದರೆ ಜೆಡಿಎಸ್ಗೆ ಒಂದೂ ಸೀಟೂ ಬರುತ್ತಿರಲಿಲ್ಲ ಎಂದರು.

‘ನಿತಿಶ್ ಕುಮಾರ್ ಕರೆದಿದ್ದಾರೆ’
ಇದೇ ವೇಳೆ ಪಕ್ಷ ತ್ಯಜಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ.. ನನಗೆ ನಿತಿಶ್ ಕುಮಾರ್ ಕರೆದಿದ್ದಾರೆ. ಆಪ್ನಿಂದಲೂ ಕರೆದಿದ್ದಾರೆ. ಮೊದಲು ಪ್ರಾದೇಶಿಕ ಪಕ್ಷ ಉಳಿಯಬೇಕು ಎಂಬುವುದೇ ನನ್ನ ನಿಲುವು. ಮೈತ್ರಿಗೆ 19 ಮಂದಿ ಶಾಸಕರೂ ಜೈ ಅಂದಿಲ್ಲ. ಹಲವಾರು ಮಂದಿ ಅಸಮಾಧಾನಗೊಂಡಿದ್ದಾರೆ. ಅವರ ಸಂಖ್ಯೆ ಎಷ್ಟು ಎಂದು ನನ್ನ ಬಳಿ ಕೇಳಬೇಡಿ..

ಪಕ್ಷ ಬಿಡುವ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಚಿಂತನೆ ಇಲ್ಲ. ನಾನು ಎಲೆಕ್ಷನ್ಗೆ ನಿಲ್ಲಲ್ಲ ಎಂದಿದ್ದೇನೆ. ಮಹಾತ್ಮ ಗಾಂಧಿ ಎಲೆಕ್ಷನ್ ನಿಂತರೂ, ಗಾಂಧಿ ನಿಂತಿದ್ದಾರೆ ಎನ್ನುವುದಕ್ಕೆ 20 ಕೋಟಿ ಬೇಕು. ನಾನು ನೇರವಾಗಿ ಬಿಜೆಪಿಗೆ ಹೋಗಬಹುದಿತ್ತು. ಅಲ್ಲಿಯೇ ಸ್ಥಾನ ಖಾಲಿ ಇದೆ. ನಾನು ಹೋಗಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಆದ ಸ್ಥಿತಿ ಇಲ್ಲಿಯೂ ಆಗಬಹುದು. ಚಿಹ್ನೆಗೆ ಕಂಟಕ ಬರುವ ಸಾಧ್ಯತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಬ್ರಾಹಿಂ ಎಚ್ಚರಿಕೆ
ಪಕ್ಷದಲ್ಲಿ ನಿಲುವು ತೆಗೆದುಕೊಳ್ಳಬೇಕು ಅಂದರೆ ರಾಜ್ಯಾಧ್ಯಕ್ಷ ಮುಖ್ಯ ಅಲ್ಲವೇ? ಶಾಸಕಾಂಗ ಪಕ್ಷದ ನಾಯಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಫಾರೂಖ್ ಅವರನ್ನು ರಾಜಕಾರಣಿ ಅಂತೀರಾ? 100 ತೆಗೆದುಕೊಂಡರೆ 10 ಫ್ರೀ ಬರುತ್ತೆ ಎಂಬ ಜಾಯಮಾನ ಅವರದ್ದು ಎಂದು ಗುಡುಗಿದರು. ನಾವು ಕರ್ನಾಟಕಕ್ಕೆ ಅಷ್ಟೇ ಸೀಮಿತ ಆಗುತ್ತೇವೆ. ನಮಗೆ ನಮ್ಮ ಚಿಹ್ನೆ ಉಳಿಯುತ್ತಾ? ಎಲ್ಲಾ ರಾಜ್ಯ ಘಟಕಗಳನ್ನು ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೇರಳದಲ್ಲಿ ನಮ್ಮ ಪಕ್ಷದ ನಾಯಕರು, ಸಚಿವರಿದ್ದಾರೆ. ಮಹಾರಾಷ್ಟ್ರದ ಮಲೇಗಾಂವ್ ಭಾಗದಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ಹೀಗಾಗಿ ನಾವು ರಾಷ್ಟ್ರೀಯ ಅಧ್ಯಕ್ಷರ ಬಳಿ ಈ ವಿಚಾರವನ್ನು ಮಾತನ್ನಾಡುತ್ತೇನೆ. ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.
