
ಪಾಟ್ನಾ: ಜಾತಿ ಆಧಾರಿತ ಸಮೀಕ್ಷೆ ನಡೆಸುತ್ತಿದ್ದ ಬಿಹಾರ ಸರ್ಕಾರ ಸೋಮವಾರ ಅಂತಿಮ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ವರದಿಯ ಪ್ರಕಾರ, ಒಟ್ಟು 13,07,25,310 ಜನಸಂಖ್ಯೆ ಇದ್ದು, ಇತರ ಹಿಂದುಳಿದ ವರ್ಗ (OBC) ಮತ್ತು ಅತ್ಯಂತ ಹಿಂದುಳಿದ ವರ್ಗಗಳ (EBC) ವರ್ಗದಲ್ಲಿ 63 ಪ್ರತಿಶತದಷ್ಟು ಜನರನ್ನು ಹೊಂದಿದೆ.

ಸರ್ಕಾರದ ಮಾಹಿತಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ 6,41,31,992 ಪುರುಷರು, 6,11,38,460 ಮಹಿಳೆಯರು, 2,836 ತೃತಿಯ ಲಿಂಗಿಗಳಿದ್ದಾರೆ. ಇದರಲ್ಲಿ 19ರಷ್ಟು ಜನರನ್ನು ಪರಿಶಿಷ್ಟ ಜಾತಿ, 1.68% ಪರಿಶಿಷ್ಟ ಪಂಗಂಡ, 27.12% ಒಬಿಸಿ, 36.01% ಇಬಿಸಿ, 15.52% ಮೀಸಲಾತಿ ವ್ಯಾಪ್ತಿಗೆ ಬಾರದ ಜನರಿದ್ದಾರೆ. ಈ ಸಮೀಕ್ಷೆಗೆ ಸರ್ಕಾರ 500 ಕೋಟಿ.ರೂ ಖರ್ಚು ಮಾಡಿದೆ.

ಸಮೀಕ್ಷೆ ನಡೆಸಿದ ತಂಡಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿನಂದಿಸಿದರು. ಇಂದು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಬಿಹಾರದಲ್ಲಿ ನಡೆಸಿದ ಜಾತಿ ಆಧಾರಿತ ಜನಗಣತಿಯ ಡೇಟಾವನ್ನು ಪ್ರಕಟಿಸಲಾಗಿದೆ. ಜಾತಿವಾರು ಗಣತಿ ಕಾರ್ಯದಲ್ಲಿ ತೊಡಗಿರುವ ಇಡೀ ತಂಡಕ್ಕೆ ಅಭಿನಂದನೆಗಳು. ಜಾತಿವಾರು ಲೆಕ್ಕಾಚಾರದ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಪಾಟ್ನಾ ಹೈಕೋರ್ಟ್ ಬಿಹಾರದ ಜಾತಿ ಸಮೀಕ್ಷೆಯನ್ನು ಎತ್ತಿ ಹಿಡಿದಿತ್ತು. ಎರಡು ಹಂತದಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಮನೆಗಳ ಎಣಿಕೆಯ ವ್ಯಾಯಾಮವನ್ನು ಈ ವರ್ಷದ ಜನವರಿಯಲ್ಲಿ ಬಿಹಾರ ಸರ್ಕಾರವು ನಡೆಸಿತು. ಈ ನಡುವೆ ಜಾತಿ ಸಮೀಕ್ಷೆ ಪ್ರಶ್ನಿಸಿ ಹಲವು ಅರ್ಜಿಗಳನ್ನು ಹೈಕೋರ್ಟ್ಗೆ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಅವರ ಪೀಠವು ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಶ್ನಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು.

ಇದಕ್ಕೂ ಮೊದಲು ಏಕ ಸದಸ್ಯ ಪೀಠ ಈ ವರ್ಷ ಮೇ 4 ರಂದು ತಕ್ಷಣವೇ ಜಾರಿಗೆ ಬರುವಂತೆ ಜಾತಿ ಸಮೀಕ್ಷೆಗೆ ತಡೆ ನೀಡಿತ್ತು. ಇದುವರೆಗೆ ಸಂಗ್ರಹಿಸಲಾದ ಡೇಟಾವನ್ನು ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. 1948ರ ಜನಗಣತಿ ಕಾಯ್ದೆಯಡಿಯಲ್ಲಿ ಜಾತಿ ಸಮೀಕ್ಷೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ. ಆದರೆ ಈ ತಡೆಯನ್ನು ದ್ವಿ ಸದಸ್ಯ ಪೀಠ ರದ್ದು ಮಾಡಿತ್ತು.