ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರವು ಅಲ್ಪಸಂಖ್ಯಾತ ಸಮುದಾಯಗಳ ಸಬಲೀಕರಣಕ್ಕಾಗಿ ನಿಗದಿಗೊಳಿಸಲಾದ ಅನುದಾನವನ್ನು ಕಡಿತ ಗೊಳಿಸಿರುವುದು, ವಿದ್ಯಾರ್ಥಿಗಳ ಪ್ರೋತ್ಸಾಹಧನ, ವಿದ್ಯಾರ್ಥಿ ವೇತನವನ್ನು ತಡೆ ಹಿಡಿದಿರುವುದನ್ನು ವಿರೋಧಿಸಿ ಮುಸ್ಲಿಂ ಚಿಂತಕರ ಚಾವಡಿಯು ರಾಜ್ಯಾದ್ಯಂತ ನಡೆಸುತ್ತಿರುವ ಅಭಿಯಾನದ ಭಾಗವಾಗಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿತು.
ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಸರಕಾರ ಆಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರೈಸ್ತ, ಬೌಧ್ದ, ಸಿಖ್, ಫಾರ್ಸಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನವನ್ನು ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಉನ್ನತ ವ್ಯಾಸಂಗ, ವಿದೇಶದಲ್ಲಿ ಶಿಕ್ಷಣ ಪಡೆಯಲು ನೀಡಲಾಗುತ್ತಿದ್ದ ಪ್ರೋತ್ಸಾಹ ಧನ, ವಿವಿಧ ಹಂತದ ವಿದ್ಯಾಭ್ಯಾಸಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನಗಳಿಗೆ ಅನುದಾನ ನೀಡದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಅತಂತ್ರಗೊಳಿಸಿ ವಿದ್ಯಾಭ್ಯಾಸ ಮೊಟಕುಗೊಳಿಸುವ ಸ್ಥಿತಿ ನಿರ್ಮಿಸಲಾಗಿದೆ ಎಂದು ಚಾವಡಿಯು ದೂರಿದೆ.
ಸರಕಾರದ ಇಂತಹ ನಡೆಯನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದು ಎಂದು ಹೇಳಿರುವ ಮುಸ್ಲಿಂ ಚಿಂತಕರ ಚಾವಡಿಯು ಯಾವುದೇ ಹೊಸ ಯೋಜನೆ ಜಾರಿಗೊಳಿಸದೆ ಇದ್ದರೂ ಈಗಾಗಲೆ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು, ಅದಕ್ಕೆ ಬೇಕಿರುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿಯಲ್ಲಿ ಮನವಿ ಮಾಡಿಕೊಂಡಿದೆ.
ನಿಯೋಗದಲ್ಲಿ ಚಿಂತಕರ ಚಾವಡಿಯ ರಾಜ್ಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮಂಗಳೂರು ಪಾಲಿಕೆಯ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಎನ್ ಇ ಮುಹಮ್ಮದ್, ಸಾಮಾಜಿಕ ಕಾರ್ಯಕರ್ತರಾದ ಬಾವ ಪದರಂಗಿ, ಅಬ್ದುಲ್ ಖಾದರ್ ಇಡ್ಮ, ಇಮ್ತಿಯಾಜ್ ಪಾಂಡೇಶ್ವರ, ನೌಷಾದ್ ಬೆಂಗ್ರೆ ಉಪಸ್ಥಿತರಿದ್ದರು.
