
ಒಂದೇ ವರ್ಷದಲ್ಲಿ ಎರಡು ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಗಳಿಸುವುದು ಎಂದರೆ ಸುಲಭದ ಮಾತಲ್ಲ. ಅಂಥ ಸಾಧನೆಯನ್ನು ಶಾರುಖ್ ಖಾನ್ ಮಾಡಿದ್ದಾರೆ. ‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳು 1000 ಕೋಟಿ ರೂಪಾಯಿ ಕ್ಲಬ್ ಸೇರಿದ ಬಳಿಕ ‘ಡಂಕಿ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ

ನಟ ಶಾರುಖ್ ಖಾನ್ (Shah Rukh Khan) ಅವರು 2023ರಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಈ ವರ್ಷ ಅವರು ನಟಿಸಿದ ಎರಡು ಸಿನಿಮಾಗಳು ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ‘ಪಠಾಣ್’ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಿ ಸಾವಿರಾರು ಕೋಟಿ ರೂಪಾಯಿ ಗಳಿಸಿತ್ತು. ಸೆಪ್ಟೆಂಬರ್ 7ರಂದು ರಿಲೀಸ್ ಆದ ‘ಜವಾನ್ (Jawan Movie) ಕೂಡ ಈಗ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಾಧನೆ ಮಾಡಿದ್ದಕ್ಕಾಗಿ ಶಾರುಖ್ ಖಾನ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ‘ಜವಾನ್’ (Jawan) ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಮೂರನೇ ವೀಕೆಂಡ್ನಲ್ಲೂ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಆ ಮೂಲಕ ಶಾರುಖ್ ಖಾನ್ ಅವರ ಚಾರ್ಮ್ ಹೆಚ್ಚಿದೆ.

ಪಠಾಣ್’ ಬಿಡುಗಡೆ ಆಗುವುದಕ್ಕೂ ಮುನ್ನ ಶಾರುಖ್ ಖಾನ್ ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿದ್ದವು. ಸತತ ಫ್ಲಾಪ್ ಕಂಡ ಅವರನ್ನು ಹಿಗ್ಗಾಮಗ್ಗಾ ಟೀಕೆ ಮಾಡಲಾಗುತ್ತಿತ್ತು. ಹಾಗಾಗಿ ಅವರು ದೀರ್ಘ ಬ್ರೇಕ್ ಪಡೆದುಕೊಂಡಿದ್ದರು. ಆದರೆ 2023ರ ಆರಂಭದಲ್ಲಿ ಎಲ್ಲವೂ ಬದಲಾಯಿತು. ‘ಪಠಾಣ್’ ಸಿನಿಮಾ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರಿಂದ ಶಾರುಖ್ ಖಾನ್ ಅವರ ವೃತ್ತಿಜೀವನಕ್ಕೆ ಹೊಸ ಚೈತನ್ಯ ಸಿಕ್ಕಿತು. ಈಗ ‘ಜವಾನ್’ ಕೂಡ ವಿಶ್ವಾದ್ಯಂತ 1004 ಕೋಟಿ ರೂಪಾಯಿ ಗಳಿಸಿರುವುದು ಶಾರುಖ್ ಅಭಿಮಾನಿಗಳಿಗೆ ಖುಷಿ ನೀಡಿದೆ.

ಒಂದೇ ವರ್ಷದಲ್ಲಿ ಎರಡು ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಗಳಿಸುವುದು ಎಂದರೆ ಸುಲಭದ ಮಾತಲ್ಲ. ಅಂಥ ಸಾಧನೆಯನ್ನು ಶಾರುಖ್ ಖಾನ್ ಮಾಡಿದ್ದಾರೆ. ‘ಪಠಾಣ್’ ಮತ್ತು ‘ಜವಾನ್’ ಸಿನಿಮಾಗಳು 1000 ಕೋಟಿ ರೂಪಾಯಿ ಕ್ಲಬ್ ಸೇರಿದ ಬಳಿಕ ‘ಡಂಕಿ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಆ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ ತೆರೆಕಾಣಲಿದೆ. ಆ ಚಿತ್ರ ಕೂಡ ಸಾವಿರಾರು ಕೋಟಿ ರೂಪಾಯಿ ಗಳಿಸಿದರೆ ಶಾರುಖ್ ಖಾನ್ ಅವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚುತ್ತದೆ.

ಜವಾನ್’ ಸಿನಿಮಾದ ಗೆಲುವಿನಲ್ಲಿ ಅನೇಕರ ಕೊಡುಗೆ ಇದೆ. ನಿರ್ದೇಶಕ ಅಟ್ಲಿ ಅವರು ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮಾಸ್ ಮನರಂಜನೆಯ ಜೊತೆಗೆ ಒಂದಷ್ಟು ಸಾಮಾಜಿಕ ಸಂದೇಶವನ್ನೂ ನೀಡಿದ್ದಾರೆ. ಅತ್ಯುತ್ತಮವಾದ ಆ್ಯಕ್ಷನ್ ದೃಶ್ಯಗಳಲ್ಲಿ ಶಾರುಖ್ ಖಾನ್ ಮಿಂಚಿದ್ದಾರೆ. ಪಾತ್ರವರ್ಗದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಮುಂತಾದವರು ಇರುವುದರಿಂದ ಚಿತ್ರದ ಮೆರುಗು ಹೆಚ್ಚಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಜವಾನ್’ ಸಿನಿಮಾಗೆ 563 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.