
ಬಂಟ್ವಾಳ ಸೆ 22 : ತಾಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ ನಗರ, ಕೊಳಕೆ ಎಂಬಲ್ಲಿ ಈದ್ ಮಿಲಾದ್ ಹಬ್ಬಕ್ಕೆ ಶುಭಕೋರಿ ಹಾಕಲಾಗಿದ್ದ ಬ್ಯಾನರನ್ನು ಕಳೆದ ದಿನ ರಾತ್ರಿ ಇಲ್ಲಿ ನಡೆದ ಗಣೇಶೋತ್ಸವದ ಶೋಭಯಾತ್ರೆಯ ವೇಳೆ ಕಿಡಿಗೇಡಿಗಳು ಹರಿದಿರುವುದು ಈ ಭಾಗದ ಶಾಂತಿಯನ್ನು ಕದಡುವ ಉದ್ದೇಶಪೂರ್ವಕ ಕೃತ್ಯವೆಂದು ಎಸ್.ಡಿ.ಪಿ.ಐ ಕಲ್ಲಡ್ಕ ಬ್ಲಾಕ್ ಅಧ್ಯಕ್ಷರಾದ ಮುಬಾರಕ್ ಕಾರಾಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಂದಿನ ವಾರ ಈದ್ ಮಿಲಾದ್ ಆಚರಣೆ ನಡೆಯುತ್ತಿದ್ದು ಆ ಪ್ರಯುಕ್ತ ಗ್ರಾಮದ ವಿವಿಧೆಡೆಗಳಲ್ಲಿ ಈ ಕುರಿತು ಶುಭಕೋರುವ ಬ್ಯಾನರ್, ಬಂಟಿಂಗ್ಸ್, ದ್ವಜಗಳನ್ನು ಹಾಕುವುದು ವಾಡಿಕೆಯಾಗಿರುತ್ತದೆ. ಆದ್ದರಿಂದ ಕಳೆದ ದಿನ ಈ ಕುಕೃತ್ಯ ನಡೆಸಿರುವ ಕಿಡಿಗೇಡಿಗಳು ತಮ್ಮ ಕೃತ್ಯಗಳನ್ನು ಮುಂದುವರೆಸಿ ಶಾಂತಿ ಕದಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ಪೊಲೀಸ್ ಇಲಾಖೆ ಈ ಕೂಡಲೇ ಬ್ಯಾನರ್ ಹರಿದಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಹಬ್ಬಗಳನ್ನು ಸುಸೂತ್ರವಾಗಿ ಆಚರಿಸಲು ಅನುವುಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

