Ashraf Kammaje|
Updated on: Sep 17, 2023 | 12:31 PM

Yashobhoomi Features: ವಿಶ್ವದರ್ಜೆಯ ಕನ್ವೆನ್ಷನ್ ಮತ್ತು ಎಕ್ಸ್ಪೋ ಕೇಂದ್ರವಾದ ಯಶೋಭೂಮಿಯ ಮೊದಲ ಹಂತದ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದು ಉದ್ಘಾಟನೆ ಮಾಡಿದ್ದಾರೆ. 5,400 ಕೋಟಿ ರೂ ಅಂದಾಜು ವೆಚ್ಚದ ಈ ಕಟ್ಟಡಕ್ಕೆ ಹಲವು ವಿಶೇಷತೆಗಳಿವೆ. ಅಂತಾರಾಷ್ಟ್ರೀಯ ಸಭೆ, ಸಮಾರಂಭ, ಪ್ರದರ್ಶನಗಳನ್ನು ನಡೆಸಲು ಅನುಕೂಲವಾಗುವಷ್ಟು ಬೃಹತ್ ಜಾಗದಲ್ಲಿ ಭವ್ಯವಾದ ಯಶೋಭೂಮಿಯನ್ನು ನಿರ್ಮಿಸಲಾಗಿದೆ.

ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನವಾದ (PM Narendra Modi birthday) ಇಂದು ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆ ಆಗಿದೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಪ್ರಧಾನಿಯವರು ತಮ್ಮ ಜನ್ಮದಿನದಂದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಎಕ್ಸ್ಪೋ ಸೆಂಟರ್ನ (IICC) ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ. ಯಶೋಭೂಮಿ ಎಂದು ಕರೆಯಲಾಗುವ ಈ ಎಕ್ಸ್ಪೋ ಸೆಂಟರ್ಗೆ ಎಕ್ಸ್ಪ್ರೆಸ್ವೆ ಕನೆಕ್ಟಿವಿಟಿ ಕೂಡ ನೀಡಲಾಗಿದೆ. ದ್ವಾರಕಾ ಸೆಕ್ಟರ್ 21ನಲ್ಲಿರುವ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ ಅನ್ನು ಯಶೋಭೂಮಿ ಮೆಟ್ರೋ ಸ್ಟೇಷನ್ವರೆಗೂ ವಿಸ್ತರಿಸಲಾಗಿದೆ. ಯಶೋಭೂಮಿ ಮೆಟ್ರೋಸ್ಟೇಷನ್ ಸ್ಥಳವು ದ್ವಾರಕಾ ಸೆಕ್ಟರ್ 25ರಲ್ಲಿ ಇದೆ.

ನರೇಂದ್ರ ಮೋದಿ ಅವರು ಏರ್ಪೋರ್ಟ್ ಲೈನ್ ವಿಸ್ತರಣೆಗೆ ಚಾಲನೆ ಕೊಟ್ಟ ಬಳಿಕ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಜನರ ಜೊತೆ ಕುಳಿತು ಪ್ರಯಾಣಿಸಿದರು.
ಯಶೋಭೂಮಿ ವಿಶೇಷತೆಗಳೇನು?
- ಯಶೋಭೂಮಿ ಎಂಬುದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್ಪೋ ಸೆಂಟರ್ (ಐಐಸಿಸಿ). ಅಂತಾರಾಷ್ಟ್ರೀಯ ಸಭೆ, ಸಮಾರಂಭ, ಪ್ರದರ್ಶನಗಳನ್ನು ಆಯೋಜಿಸಲು ಇರುವ ಬೃಹತ್ ಕೇಂದ್ರವಾಗಿದೆ. ಇಂಥ ಸೌಲಭ್ಯ ಹೊಂದಿರುವ ವಿಶ್ವದ ಬೃಹತ್ ಕಟ್ಟಡಗಳ ಪೈಕಿ ಯಶೋಭೂಮಿ ಒಂದೆನಿಸಿದೆ.

ಯಶೋಭೂಮಿಯ ಒಟ್ಟು ಯೋಜನಾ ಸ್ಥಳ ಬರೋಬ್ಬರಿ 8.9 ಲಕ್ಷ ಚದರ ಮೀಟರ್ ವಿಸ್ತೀರ್ಣದ್ದಾಗಿದೆ. ಇದರಲ್ಲಿ ಕಟ್ಟಡ ನಿರ್ಮಾಣ ಪ್ರದೇಶ 1.8 ಲಕ್ಷ ಚದರ ಮೀಟರ್ ವಿಸ್ತೀರಣದ್ದಾಗಿದೆ.
- ಯಶೋಭೂಮಿ ನಿರ್ಮಾಣಕ್ಕೆ ಅಂದಾಜು 5,000 ಕೋಟಿ ರುಪಾಯಿಗೂ ಹೆಚ್ಚು ವೆಚ್ಚವಾಗುತ್ತಿದೆ.
- ಯಶೋಭೂಮಿಯ ಕನ್ವೆನ್ಷನ್ ಸೆಂಟರ್ ಅನ್ನು 73,000 ಚದರ ಮೀಟರ್ ಜಾಗದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಮುಖ್ಯ ಆಡಿಟೋರಿಯಂ, 13 ಮೀಟಿಂಗ್ ರೂಮ್ ಸೇರಿದಂತೆ 15 ಕನ್ವೆನ್ಷನ್ ರೂಮ್ಗಳು ಒಳಗೊಂಡಿವೆ.

- ಯಶೋಭೂಮಿಯಲ್ಲಿ ಪರಿಸರಸ್ನೇಹಿ ಎನಿಸುವ ಹಲವು ಫೀಚರ್ಗಳಿವೆ. ತ್ಯಾಜ್ಯನೀರು ನಿರ್ವಹಣೆ ವ್ಯವಸ್ಥೆ ಇದೆ. ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಇದೆ. ಮೇಲ್ಚಾವಣಿ ಸೌರ ಫಲಕಗಳಿವೆ. ಈ ಕಟ್ಟಡಗಳ ಸಂಕೀರ್ಣಕ್ಕೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ನಿಂದ ಅತ್ಯುಚ್ಚವೆನಿಸುವ ಪ್ಲಾಟಿನಂ ಪ್ರಮಾಣಪತ್ರ ಕೊಡಲಾಗಿದೆ.
- ಯಶೋಭೂಮಿ ಸಂಕೀರ್ಣದಲ್ಲಿರುವ ಪ್ರಮುಖ ಆಡಿಟೋರಿಯಂ ಅಥವಾ ಸಭಾಂಗಣವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಶಬ್ದದ ನಿರ್ವಹಣೆ ಉತ್ತಮವಾಗಿರುವಂತೆ ನಿರ್ಮಿಸಲಾಗಿದೆ. ವಿಶ್ವದರ್ಜೆ ಮಟ್ಟದ ಆಡಿಟೋರಿಯಂ ಇದಾಗಿದೆ