
ಬೆಂಗಳೂರು: ನಾನು ಸನಾತನ ಧರ್ಮದಲ್ಲಿ (Sanatana Dharma) ಹುಟ್ಟಿಲ್ಲ, ನಾನು ನಮ್ಮ ಅಪ್ಪ, ಅಮ್ಮನಿಗೆ ಹುಟ್ಟಿದ್ದೇನೆ. ನಾನು ಧರ್ಮದ ವಿರುದ್ಧ ಅಲ್ಲ, ಪ್ರಧಾನಿ ಮೋದಿ (Narendra Modi) ವಿರುದ್ಧ ಎಂದು ನಟ ಪ್ರಕಾಶ್ ರೈ (Prakash Raj) ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗೌರಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಘಟನೆಯೊಂದನ್ನು ವಿವರಿಸುತ್ತಾ, ನಾನು ಇಲ್ಲಿಗೆ ಬರುವುದಕ್ಕೂ ಮೊದಲು ಖಾಸಗಿ ಚಾನಲ್ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದೆ. ಅಲ್ಲಿ ಎಲ್ಲಾ 30 ಜನರು ಕಾವಿ ಶಾಲು ಹಾಕಿಕೊಂಡು ಬಂದಿದ್ದರು. ಅವರನ್ನು ನೋಡಿ ನಾನು ನಿಮ್ಮ ಜೊತೆ ಮಾತನಾಡಬೇಕು ಎಂದು ಕರೆದೆ. ನಾನು ಟ್ವೀಟ್‌ನಲ್ಲಿ ಸನಾತನಿ ಸಂಸತ್ ಎಂದು ಹಾಕಿದ್ದೆ. ಅದಕ್ಕೆ ಒಬ್ಬರು ಪ್ರಶ್ನೆ ಮಾಡಿ, ನೀನು ಸನಾತನ ಧರ್ಮ ಅಲ್ವಾ ಎಂದು ಕೇಳಿದರು ಎಂದು ತಿಳಿಸಿದರು.

ಇದಕ್ಕೆ ಉತ್ತರಿಸುತ್ತಾ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಾನು ನಮ್ಮ ಅಪ್ಪ ಅಮ್ಮನಿಗೆ ಹುಟ್ಟಿದ್ದೇನೆ. ನಾನು ಧರ್ಮದ ವಿರುದ್ಧ ಅಲ್ಲ. ಪ್ರಧಾನಿ ಮೋದಿಯ ವಿರುದ್ಧ. ಮೋದಿ ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಹೋಮ ಹವನ ಮಾಡಿಸಿದ್ರು. ಅದು ನಮ್ಮ ಸಂಸತ್, ಹೋಮ ಹವನ ಮಾಡಬಾರದು ಎಂದರು.

ನಮ್ಮನ್ನು ಕೊಲ್ಲುತ್ತೇನೆ ಎಂಬುವವರು ಹೇಡಿಗಳು. ಯಾವುದನ್ನು ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ ಮೋದಿಯಿಂದ ಅದು ಆಗುತ್ತಿದೆ. ಅದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದರು.
ನಾವು ಗೌರಿಯನ್ನು ಹೂಳಲಿಲ್ಲ, ಬಿತ್ತಿದ್ದೇವೆ. ನಾನು ಧರ್ಮದ ವಿರುದ್ಧ ಅಲ್ಲ, ದುರುಳರ ವಿರುದ್ಧ. ಗೌರಿಯ ನೆನಪು, ಧೈರ್ಯ ಶಾಶ್ವತ. ಈ ಸಮಾಜದಲ್ಲಿ ನಾವು ಅಡ್ಡಗೋಡೆಯ ಮೇಲೆ ದೀಪದಂತೆ ಇರಬಾರದು. ಒಂದು ಕಡೆ ನಿಂತುಕೊಳ್ಳಲೇಬೇಕಾಗುತ್ತದೆ. ಗೌರಿ ಧ್ವನಿಯಾಗಿ ನಾವು ಮಾತನಾಡಲೇಬೇಕು ಎಂದರು
