
ಮಂಗಳೂರು: ಈ ಬಾರಿಯ ಚುನಾವಣೆ ವೇಳೆ ಭಾರೀ ಸುದ್ದು ಮಾಡಿದ ಟೋಲ್ ಪ್ಲಾಜಾ ಅಂದ್ರೆ ಅದು ಸುರತ್ಕಲ್ ಟೋಲ್. ಇದು ಅನದಿಕೃತ ಟೋಲ್, ಇದನ್ನು ರದ್ದು ಮಾಡಬೇಕು ಅಂತಾ ಸಾಕಷ್ಟು ಸಂಘಟನೆಗಳು ಹೋರಾಟ ಮಾಡಿದವು. ಕರಾವಳಿಗರ ಭಾರೀ ಹೋರಾಟದಿಂದ ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಬಂದ್ ಮಾಡಲಾಯ್ತು. ಬಳಿಕ ಇದರ ಕ್ರೆಡಿಟ್ ಕಿತ್ತಾಟ ಕೂಡ ನಡೆಯಿತು. ಆದರೆ ಈಗ ಈ ಟೋಲ್ ಮತ್ತೆ ಕಾರ್ಯಾರಂಭವಾಗುವ ಲಕ್ಷಣಗಳು ಕಾಣುತ್ತಿದೆ

ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ (Surathakl Toll) ನಿಂದ ಸಾಕಷ್ಟು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಮಾಡುತ್ತಿತ್ತು. ಆದರೆ ಇದು ಅಕ್ರಮ ಟೋಲ್ ಅಂತಾ ಇದರ ವಿರುದ್ಧ ಸಾಕಷ್ಟು ಸಂಘಟನೆಗಳು, ರಾಜಕೀಯ ಪಕ್ಷಗಳು ನಿರಂತರ ಪ್ರತಿಭಟನೆಗಳನ್ನು ಮಾಡಿದ್ವು. ಚುನಾವಣಾ ವರ್ಷವನ್ನು ಗುರಿಯಿಟ್ಟುಕೊಂಡು ಮಾಡಿದ ಬೃಹತ್ ಪ್ರತಿಭಟನೆಯಿಂದಾಗಿ ಸಂಸದ ನಳೀನ್ ಕುಮಾರ್ ಕಟೀಲ್ ಈ ಟೋಲ್ ರದ್ದು ಮಾಡಲಾಗಿದೆ ಅಂತಾ ಒಂದು ನೋಟಿಫಿಕೇಷನ್ ನ್ನು ಮಾಡಿಸಿದ್ರು. ಆ ಬಳಿಕ ಟೋಲ್ ನಲ್ಲಿ ಹಣ ಸಂಗ್ರಹ ನಿಲ್ಲಿಸಲಾಗಿತ್ತು. ಇನ್ನೇನು ಈ ಟೋಲ್ ಪ್ಲಾಜಾವನ್ನು ತೆರವುಗೊಳಿಸುತ್ತಾರೆ. ಅನ್ನುವಷ್ಟರಲ್ಲಿ ಈಗ ಮತ್ತೆ ಟೋಲ್ ಸಂಗ್ರಹದ ಆತಂಕ ಎದುರಾಗಿದೆ.

ಎಂಟು ತಿಂಗಳಿಂದೀಚೆಗೆ ಈ ಟೋಲ್ ಪ್ಲಾಜಾ ನಿರ್ವಹಣೆಯಿಲ್ಲದೆ ಶಿಥಿಲವಾಗಿತ್ತು. ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ ಹಲವು ಅಪಘಾತಗಳಿಗೂ ಕಾರಣವಾಗಿತ್ತು. ಶಿಥಿಲ ಟೋಲ್ ಪ್ಲಾಜಾದ ಅವಶೇಷಗಳು ಕುಸಿದು ಅವಘಡ ಸಂಭವಿಸುವ ಸಾಧ್ಯತೆಯೂ ಇತ್ತು. ಹಾಗಾಗಿ ತೆರವುಗೊಳಿಸುವಂತೆ ನಾಗರಿಕರ ಆಗ್ರಹವೂ ಕೇಳಿಬಂದಿತ್ತು. ಆದರೆ ಈಗ ಈ ಟೋಲ್ ಪ್ಲಾಜಾವನ್ನು ತೆರವುಗೊಳಿಸುವ ಬದಲು ಭರದಿಂದ ದುರಸ್ತಿಗೊಳಿಸಲಾಗುತ್ತಿದೆ. ವಾಹನಗಳು ಗುದ್ದಿ ಮುರಿದು ಬಿದ್ದಿದ್ದ ಕಂಬ, ಶಿಥಿಲ ಛಾವಣಿಯನ್ನು ರಿಪೇರಿ ಮಾಡಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಟೋಲ್ ಹೋರಾಟ ಸಮಿತಿಯ ಸದಸ್ಯರು ಟೋಲ್ ಪ್ಲಾಜಾ ಬಳಿ ಭೇಟಿ ನೀಡಿದ್ರು.

ಇನ್ನು ಈ ಟೋಲ್ ನ ಕಲೆಕ್ಷನ್ ನಿಲ್ಲಸಲು ಸಾದ್ಯವಿಲ್ಲ ಅನ್ನೊದೇ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ವಾದವಾಗಿತ್ತು. ಆದ್ರಿಂದ ಹೆಜಮಾಡಿ ಟೋಲ್ ಗೆ ಇದನ್ನು ಮರ್ಜ್ ಮಾಡುವ ಭರವಸೆ ಮೇಲೆ ಈ ಟೋಲ್ ನ್ನು ರದ್ದು ಮಾಡಲಾಗಿತ್ತು. ಆದರೆ ಹೆಜಮಾಡಿಯಲ್ಲಿರೋ ನವಯುಗ ಟೋಲ್ ಗೆ ಇದನ್ನು ಮರ್ಜ್ ಮಾಡಲು ಸಾಧ್ಯವಾಗಿಲ್ಲ. ಅಲ್ಲದೇ ಸುರತ್ಕಲ್ ನಿಂದ ಬಿ.ಸಿ.ರೋಡ್ ವರೆಗೂ ರಸ್ತೆ ನಿರ್ವಹಣೆಯನ್ನು ಇದೇ ಟೋಲ್ ನಲ್ಲಿ ಸಂಗ್ರಹವಾದ ಹಣದಿಂದ ಮಾಡಬೇಕು. ಆದರಿಂದ ಟೋಲ್ ಮತ್ತೆ ಆರಂಭಿಸಲು ಎನ್.ಹೆಚ್.ಎ.ಐ ಹುನ್ನಾರ ನಡೆಸಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

ಈ ಬಗ್ಗೆ ದೂರುಗಳು ಬಂದಿದೆ. ಆದ್ರೆ ಟೋಲ್ ಪುನಃ ತೆರೆಯುವ ಯೋಚನೆ ಸದ್ಯಕ್ಕಿಲ್ಲ. ಸುರತ್ಕಲ್ನ ಟೋಲ್ ಪ್ಲಾಜಾವನ್ನು ಹೆಜಮಾಡಿಯ ಪ್ಲಾಜಾದೊಂದಿಗೆ ವಿಲೀನಗೊಳಿಸಲು ರಾಜ್ಯ ಸರಕಾರದ ಸಹಕಾರ ಅಗತ್ಯವಿದೆ.ವಿಲೀನ ಆಗುವ ಪ್ರಕ್ರಿಯೆ ಹಾಗೂ ಕಾರ್ಯದ ರೂಪುರೇಷೆ ಸೂಕ್ತ ನಿರ್ಧಾರಕ್ಕೆ ಬರುವವರೆಗೆ ಸುರತ್ಕಲ್ ಟೋಲ್ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಳ್ಳಲು ದುರಸ್ತಿ ಮಾಡುತ್ತಿದ್ದೇವೆ. ವಿಲೀನದ ಅನುಮತಿಗಾಗಿ ಕಾಯುತ್ತಿದ್ದೇವೆ.
ಸದ್ಯ ರಸ್ತೆ ನಿರ್ವಣೆಗಾಗಿ ಹಾಗೂ ಟೋಲ್ ವಿಲೀನವಾಗದ ಕಾರಣ ಇದನ್ನು ರಿಓಪನ್ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ ಸೈಡ್ ವರ್ಕ್ ಮಾಡುತ್ತಿದೆ ಅನ್ನೊ ಗುಸುಗುಸು ಕೇಳುತ್ತಿದೆ. ಹೀಗಾಗಿ ಮತ್ತೆ ಪ್ರಯಾಣಿಕರ ಜೇಬಿಗೆ ಬರೆ ಬೀಳೋ ಎಲ್ಲಾ ಲಕ್ಷಣಗಳು ಕಾಣುತ್ತಿದೆ.