
ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶನಿವಾರ ಹೈ ವೋಲ್ಟೆàಜ್ ಪಂದ್ಯ ವೊಂದು ನಡೆಯಲಿದೆ. ಸಾಂಪ್ರ ದಾಯಿಕ ಹಾಗೂ ಬದ್ಧ ಎದುರಾಳಿ ಗಳಾದ ಭಾರತ ಮತ್ತು ಪಾಕಿಸ್ಥಾನ “ಎ’ ವಿಭಾಗದ ಲೀಗ್ ಹಂತದಲ್ಲಿ ಪರಸ್ಪರ ಎದುರಾಗಲಿವೆ. ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ಭಾರೀ ಜೋಶ್‌ನಲ್ಲಿದ್ದಾರೆ. ಆದರೆ ಈ ಜಿದ್ದಾಜಿದ್ದಿ ಕ್ರಿಕೆಟ್ ಕದನಕ್ಕೆ ಮಳೆಯಿಂದ ಅಡಚಣೆ ಯಾಗುವ ಎಲ್ಲ ಸಾಧ್ಯತೆ ಇದೆ.

ಪಂದ್ಯ ಮಳೆಯಿಂದ ರದ್ದಾದರೆ ಎರಡೂ ತಂಡಗಳಿಗೆ ಅಂಕಗಳನ್ನು ಹಂಚಲಾಗುವುದು. ಆಗ ಪಾಕಿಸ್ಥಾನ ಸೂಪರ್-4 ಹಂತ ತಲುಪಲಿದೆ. ಬಾಬರ್ ಪಡೆ ಮೊದಲ ಪಂದ್ಯದಲ್ಲಿ ನೇಪಾಲವನ್ನು 238 ರನ್ನುಗಳಿಂದ ಮಣಿಸಿತ್ತು. ಭಾರತ ಸೋಮವಾರದ ಪಂದ್ಯದಲ್ಲಿ ದುರ್ಬಲ ನೇಪಾಲವನ್ನು ಎದುರಿಸಲಿದೆ.

ಈ ಬಾರಿಯ ಏಷ್ಯಾ ಕಪ್ ಮಾದರಿಯಂತೆ ಭಾರತ-ಪಾಕಿಸ್ಥಾನ 3 ಸಲ ಎದುರಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಲೀಗ್ ಹಂತದ ಬಳಿಕ ಎರಡೂ ತಂಡಗಳು ಸೂಪರ್-4 ಹಂತದಲ್ಲೂ ಮುಖಾಮುಖೀ ಆಗಲಿಕ್ಕಿದೆ. ಅಕಸ್ಮಾತ್ ಈ ತಂಡಗಳೇ ಫೈನಲ್‌ಗೆ ಲಗ್ಗೆ ಇರಿಸಿದರೆ ಇನ್ನೊಂದು ರೋಚಕ ಹಣಾಹಣಿಗೆ ವೇದಿಕೆ ಸಜ್ಜುಗೊಳ್ಳಲಿದೆ.

ಬ್ಯಾಟಿಂಗ್ ಯಶಸ್ಸು ನಿರ್ಣಾಯಕ
ಭಾರತದ ಯಶಸ್ಸು ಅಗ್ರ ಕ್ರಮಾಂಕದ ಬ್ಯಾಟಿಂಗ್ ಮೇಲೆ ಅವಲಂಬಿಸಿದೆ. ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಇಶಾನ್ ಕಿಶನ್ ಅವರನ್ನೊಳಗೊಂಡ ಭಾರತದ ಬ್ಯಾಟಿಂಗ್ ಸರದಿ ಬಲಿಷ್ಠವಾಗಿಯೇ ಗೋಚರಿಸುತ್ತಿದೆ. ಆದರೆ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ಅವರ ಮೊದಲ ಸ್ಪೆಲ್ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲುವುದು ಮುಖ್ಯ. ಕನಿಷ್ಠ ಮೊದಲ 10 ಓವರ್‌ಗಳಲ್ಲಿ ನಮ್ಮ ಆರಂಭಿಕರು ಕ್ರೀಸ್ ಆಕ್ರಮಿಸಿಕೊಂಡದ್ದೇ ಆದಲ್ಲಿ ಉತ್ತಮ ಮೊತ್ತ ಪೇರಿಸಬಹುದು. ಅಥವಾ ಚೇಸಿಂಗ್‌ನಲ್ಲಿ ಮೇಲುಗೈ ಸಾಧಿಸಬಹುದು.

ಬಳಿಕ ಶದಾಬ್ ಖಾನ್ ಅವರ ಲೆಗ್‌ಸ್ಪಿನ್ ಸವಾಲು ಎದುರಾಗಲಿದೆ. ಈ ವರ್ಷದ 8 ಪಂದ್ಯಗಳಿಂದ 11 ವಿಕೆಟ್ ಕಿತ್ತಿರುವ ಶದಾಬ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದ್ದಾರೆ.
ಭಾರತದ ಬೌಲಿಂಗ್‌ನತ್ತ ಬರುವು ದಾದರೆ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಬೇಕಾಗುತ್ತದೆ. ಕುಲದೀಪ್ ಅವರ ಚೈನಾಮನ್ ಎಸೆತಗಳು ಪಲ್ಲೆಕೆಲೆ ಟ್ರ್ಯಾಕ್ ಮೇಲೆ ಹೆಚ್ಚು ಘಾತಕವಾಗಲಿವೆ ಎಂಬುದೊಂದು ನಿರೀಕ್ಷೆ. ಕುಲದೀಪ್ ಈ ವರ್ಷದ 11 ಪಂದ್ಯಗಳಿಂದ 22 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ಹಾರ್ದಿಕ್ ಪಾಂಡ್ಯ ಜಬರ್ದಸ್ತ್ ಪ್ರದರ್ಶನ ನೀಡಬೇಕಾದುದು ಮುಖ್ಯ.
ಪಾಕ್ ಬ್ಯಾಟಿಂಗ್ ಸರದಿ ಫಿಕ್ಸ್
ಪಾಕಿಸ್ಥಾನದ ಬ್ಯಾಟಿಂಗ್ ಸರದಿ ಈಗಾಗಲೇ ಫಿಕ್ಸ್ ಆಗಿದೆ. ಫಖಾರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್, ಇಫ್ತಿಖಾರ್ ಅಹ್ಮದ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಇವರಲ್ಲಿ ಬಾಬರ್ ಮತ್ತು ಇಫ್ತಿಖಾರ್ ನೇಪಾಲ ವಿರುದ್ಧ ಸೆಂಚುರಿ ಬಾರಿಸಿ ಮೆರೆದಿದ್ದಾರೆ. ಆಘಾ ಸಲ್ಮಾನ್ ಕೂಡ ಅಪಾಯಕಾರಿ. ನೇಪಾಲವನ್ನು ಮಣಿಸಿದ ತಂಡವೇ ಶನಿವಾರ ಕಣಕ್ಕಿಳಿಯಲಿದೆ ಎಂಬುದಾಗಿ ಪಾಕ್ ಘೋಷಿಸಿದೆ.
ಪಾಕಿಸ್ಥಾನದ ಬಲಿಷ್ಠ ಬ್ಯಾಟಿಂಗ್ ಸರದಿಗೆ ನಮ್ಮ ಬೌಲರ್ ಎಷ್ಟರ ಮಟ್ಟಿಗೆ ಕಡಿವಾಣ ಹಾಕಲಿದ್ದಾರೆ ಎಂಬುದು ಮುಖ್ಯ. ಪಲ್ಲೆಕೆಲೆ ಟ್ರ್ಯಾಕ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವುದರಿಂದ ನಿಂತು ಆಡುವುದು ಸವಾಲಾಗಬಹುದು. ಈ ಸವಾಲನ್ನು ಮೆಟ್ಟಿ ನಿಂತು, ಕ್ರೀಸ್ ಆಕ್ರಮಿಸಿಕೊಂಡು, ಉತ್ತಮ ಜತೆಯಾಟ ನಡೆಸಿದ ತಂಡಕ್ಕೆ ಯಶಸ್ಸು ಒಲಿಯುವುದರಲ್ಲಿ ಅನುಮಾನವಿಲ್ಲ. ಈ ಯಶಸ್ಸು ಭಾರತದ್ದಾಗಲಿ ಎಂಬುದು ನಮ್ಮ ಹಾರೈಕೆ.