
30ಕ್ಕೂ ಹೆಚ್ಚು ನಕಲಿ ಕಂಪೆನಿಗಳ ಹೆಸರಿನಲ್ಲಿ ಬಿಲ್‌ಗಳನ್ನು ಸೃಷ್ಟಿಸಿ 525 ಕೋಟಿ ರು. ಅವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಇದರಿಂದ ಸರ್ಕಾರಕ್ಕೆ 90 ಕೋಟಿ ರು. ತೆರಿಗೆ ನಷ್ಟ ಉಂಟಾಗಿದೆ: ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ. ಶಿಖಾ
ಬೆಂಗಳೂರು(ಆ.31): ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಜಾಲವನ್ನು ಬೇಧಿಸಿದ್ದು, 30ಕ್ಕೂ ಹೆಚ್ಚು ನಕಲಿ ಕಂಪೆನಿಗಳ ಹೆಸರಿನಲ್ಲಿ ಬಿಲ್‌ಗಳನ್ನು ಸೃಷ್ಟಿಸಿ ರಾಜ್ಯ ಸರ್ಕಾರಕ್ಕೆ 90 ಕೋಟಿ ರು. ತೆರಿಗೆ ನಷ್ಟ ಉಂಟು ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಬುಧವಾರ ಬೆಳಗ್ಗೆ ಇಬ್ಬರು ಆರೋಪಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದು, ಈ ರೀತಿಯ ಪ್ರಕರಣವನ್ನು ಬೇಧಿಸಿರುವುದು ಇದೇ ಮೊದಲು ಎಂದು ಇಲಾಖೆ ಹೇಳಿದೆ.

ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ. ಶಿಖಾ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 30ಕ್ಕೂ ಹೆಚ್ಚು ನಕಲಿ ಕಂಪೆನಿಗಳ ಹೆಸರಿನಲ್ಲಿ ಬಿಲ್‌ಗಳನ್ನು ಸೃಷ್ಟಿಸಿ 525 ಕೋಟಿ ರು. ಅವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಇದರಿಂದ ಸರ್ಕಾರಕ್ಕೆ 90 ಕೋಟಿ ರು. ತೆರಿಗೆ ನಷ್ಟ ಉಂಟಾಗಿದೆ. ಈ ಜಾಲವು ಮಾನವಸಂಪನ್ಮೂಲ ಹಾಗೂ ಕಾರ್ಮಿಕರ ಪೂರೈಕೆಯಂತಹ ಸೇವಾ ವಲಯದ ಕಂಪೆನಿಗಳಿಗೆ ನಕಲಿ ತೆರಿಗೆ ಜಮೆ, ವರ್ಗಾವಣೆಗಳ ಬಿಲ್‌ಗಳನ್ನು ಸೃಷ್ಟಿಸಿ ನೀಡುತ್ತಿತ್ತು. ಸೇವಾ ವಲಯದಲ್ಲಿ ನಕಲಿ ಬಿಲ್ ತಯಾರಿಕೆ ಜಾಲವನ್ನು ಇದೇ ಮೊದಲ ಬಾರಿಗೆ ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಜಾಲವು ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಹಾಗೂ ಇತರ ವ್ಯಕ್ತಿಗಳ ಗುರುತು ದಾಖಲಾತಿಗಳನ್ನು ಉಪಯೋಗಿಸಿಕೊಂಡು ಸುಮಾರು 30ಕ್ಕೂ ಹೆಚ್ಚು ನಕಲಿ ಕಂಪೆನಿಗಳನ್ನು ಸೃಷ್ಟಿಸಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಜಾರಿ ವಿಭಾಗದ ಅಧಿಕಾರಿಗಳು ಎಚ್.ಎಂ. ಗುರುಪ್ರಕಾಶ್ ಮತ್ತು ಎಚ್.ಎಂ. ಮಂಜುನಾಥಯ್ಯ ಎಂಬುವವರನ್ನು ಬುಧವಾರ ಮುಂಜಾನೆ ಬಂಧಿಸಿದ್ದು, ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.

ನಕಲಿ ಬಿಲ್ಲು ತಯಾರಿಕೆ ಹಾಗೂ ತೆರಿಗೆ ವಂಚನೆಯು ಜಿಎಸ್‌ಟಿ ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧ. ಬಂಧನ, ದಂಡ, ಆಸ್ತಿ ಮುಟ್ಟುಗೋಲು, ಬ್ಯಾಂಕ್ ಖಾತೆಗಳ ಮುಟ್ಟುಗೋಲಿನಂತಹ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಜಿಎಸ್‌ಟಿ ಕಾನೂನನ್ನು ಯಾರೂ ಉಲ್ಲಂಘಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.