Edited By: Ashraf Kammaje
Updated on: Aug 30, 2023 | 11:14 AM

ಕೈಕೊಟ್ಟ ಯೋಜನೆಗಳು, ಹಳಿತಪ್ಪಿದ ಆಡಳಿತ’.. ದಿಕ್ಕು ತಪ್ಪಿದ ಸರ್ಕಾರ.. ತುಘಲಕ್ ದರ್ಬಾರಿನ ಸರ್ಕಾರ.. ಇದು ನೂರು ದಿನ ಪೂರೈಸಿರೋ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಪಡೆ ಕೊಟ್ಟಿರೋ ಬಿರುದುಗಳು.. ಶತಕ ಬಾರಿಸಿದ ಸಂಭ್ರಮದಲ್ಲಿರೋ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದ್ದು, ವೈಫಲ್ಯಗಳ ಸರಮಾಲೆಯ ಜಾರ್ಜ್‌ಶೀಟ್ ಬಿಡುಗಡೆ ಮಾಡಿದ್ದು ಇದಕ್ಕೆ ಇದೀಗ ಕಾಂಗ್ರೆಸ್ ತಿರುಗೇಟು ನೀಡಿದೆ. ಇನ್ನು ಡಿಕೆ ಶಿವಕುಮಾರ್ ಅವರು ರಾಜಕೀಯ ನಿವೃತ್ತಿ ಸವಾಲು ಹಾಕಿದ್ದಾರೆ

ಮೈಸೂರು, (ಆಗಸ್ಟ್ 30): ನೂರು ದಿನ ಪೂರೈಸಿರುವ ಸಂಭ್ರಮದಲ್ಲಿರೋ ಸರ್ಕಾರ (Karnataka Congress Government) ಇಂದು(ಆಗಸ್ಟ್ 30) ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸುತ್ತಿದೆ. ಆದ್ರೆ, ಗ್ಯಾರಂಟಿಗಳನ್ನ ವಿಳಂಬ ಮಾಡುವಲ್ಲಿ ಸರ್ಕಾರ ಎಡವಿದೆ. ದಿಕ್ಕು ತಪ್ಪಿದೆ ಎಂದು ಬಿಜೆಪಿ(BJP) ಆರೋಪಿಸಿದ್ದು, ನೂರು ದಿನ ನೂರು ವೈಫಲ್ಯ ಶೀರ್ಷಿಕೆಯಡಿ ಜಾರ್ಜ್‌ಶೀಟ್ ಬಿಡುಗಡೆ ಮಾಡಿದೆ. ಇದರಲ್ಲಿ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಡಿಕೆ ಶಿವಕುಮಾರ್(DK Shivakumar) ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದೆ. ಇನ್ನು ಇದಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಈ ಬಗ್ಗೆ ಇಂದು(ಆಗಸ್ಟ್ 30) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿಯವರು ಆರೋಪ ಸಾಬೀತು ಮಾಡಲಿ. ಇವರದ್ದನ್ನು ಬಿಚ್ಚೋ ಕಾಲ ಬರುತ್ತದೆ ಬಿಚ್ಚುತ್ತೇನೆ. ನನ್ನ ಮೇಲಿನ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಎಂದು ಸವಾಲು ಹಾಕುವ ಮೂಲಕ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.

ನೂರು ದಿನದಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮೊದಲ ಕ್ಯಾಬಿನೆಟ್ನಲ್ಲೇ ಎಲ್ಲಾ ಗ್ಯಾರಂಟಿ ಇತ್ಯರ್ಥ ಮಾಡಿದ್ದೇವೆ. ಬಿಜೆಪಿಯವರದ್ದು ಭರವಸೆ, ನಮ್ಮದು ಗ್ಯಾರಂಟಿ. ಇಂದು ಗೃಹಲಕ್ಷ್ಮೀ ಯೋಜನೆಗೆ ಇಂದು ಚಾಲನೆ ನೀಡುತ್ತಿದ್ದು, ನಾಡಿನೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರ ಮನೆಗಳಲ್ಲಿ ಹೆಣ್ಣು ಮಕ್ಕಳು ಹಬ್ಬದ ಸಂಭ್ರಮದಲ್ಲಿದ್ದಾರೆ. 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ, ಸಿಎಂ ಸಿದ್ದರಾಮಯ್ಯ, ನಾನು ಚೆಕ್ಗೆ ಸಹಿ ಹಾಕಿದ್ದು, ಯಜಮಾನಿಯರ ಬ್ಯಾಂಕ್ ಖಾತೆಗೆ 2000 ರೂ ಹಣ ಜಮೆಯಾಗುತ್ತೆ ಎಂದರು.
