
ಬಿಜೆಪಿ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ: ಕಾಂಗ್ರೆಸ್ ಗೇಲಿ
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಸ್ರೋ (ISRO) ವಿಜ್ಞಾನಿಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಬಿಜೆಪಿ (BJP) ನಾಯಕರನ್ನು ಭೇಟಿಯಾಗದೇ ತೆರಳಿದ್ದಾರೆ. ಈ ಮೂಲಕ ಮೋದಿಯವರ ಭೇಟಿ ಕೇವಲ ಇಸ್ರೋ ವಿಜ್ಞಾನಿಗಳ ಅಭಿನಂದನೆಗೆ ಮಾತ್ರ ಸೀಮಿತವಾಗಿದೆ. ಈ ವಿಚಾರವಾಗಿ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಗೇಲಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ! ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ! ಬಿಜೆಪಿ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಚಂದ್ರಯಾನ -3ರ ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಿದರು. ಈ ವೇಳೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಭೇಟಿಯ ನಿರೀಕ್ಷೆಯಲ್ಲಿದ್ದರು. ಆದರೆ ಪ್ರಧಾನಿ ಮೋದಿಯವರು ಯಾವುದೇ ನಾಯಕರನ್ನು ಭೇಟಿಯಾಗದೆ ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದ ಬಳಿಕ ಕೂಡ ಬಿಜೆಪಿ ನಾಯಕರನ್ನು ಭೇಟಿಯಾಗದೆ ದೆಹಲಿಗೆ ತೆರಳಿದ್ದಾರೆ

ಮೋದಿ ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿದ್ದರು. ಚಂದ್ರಯಾನ 3ರ ಯಶಸ್ಸು ಹಿನ್ನೆಲೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಕೆಗೆ ಅವರು ಬಂದಿದ್ದು, ಈ ನಿರ್ದಿಷ್ಟ ಕಾರ್ಯಕ್ರಮಕ್ಕೆ ಮಾತ್ರ ಸಮಯ ನಿಗದಿಪಡಿಸಲಾಗಿತ್ತು.

ಮೋದಿಯವರನ್ನು ಸ್ವಾಗತಿಸಲು ಮೂವರು ವಲಸಿಗ ಶಾಸಕರಾದ ಮುನಿರತ್ನ, ಗೋಪಾಲಯ್ಯ ಹಾಗೂ ಬೈರತಿ ಬಸವರಾಜ ಮೋದಿಯವರಿಗೆ ಕೈ ಬೀಸಿ ಸ್ವಾಗತಿಸಿದರು. ಆದರೆ ಕಾಂಗ್ರೆಸ್ ಸೇರುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಎಸ್.ಟಿ ಸೋಮಶೇಖರ್ ಬರದೇ ಅಂತರ ಕಾಯ್ದುಕೊಂಡಿದ್ದಾರೆ.