Ashraf Kammaje
Updated on:Aug 25, 2023 | 6:01 PM

ತೋಟದ ಕಾರ್ಮಿಕರು ಕೆಲಸ ಮುಗಿಸಿ ಬರುವಾಗ ಈ ಭಾಗದಲ್ಲಿ ಹಲವು ಜೀಪುಗಳು ಸಂಚರಿಸುತ್ತವೆ ಎನ್ನುತ್ತಾರೆ ಸ್ಥಳೀಯರು. ಜೀಪ್ ಆಳವಾದ ಕಂದಕಕ್ಕೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಸುಮಾರು 30 ಮೀಟರ್ ಆಳಕ್ಕೆ ಬಿದ್ದಿದ್ದು, ಸ್ಥಳೀಯರ ನೇತೃತ್ವದಲ್ಲಿ ಮೊದಲ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರು.
ಮಾನಂತವಾಡಿ (ವಯನಾಡ್) ಆಗಸ್ಟ್ 25: ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಜೀಪ್ (Jeep Accident) ಪಲ್ಟಿಯಾಗಿ ಕಂದಕಕ್ಕೆ ಬಿದ್ದು 9 ಮಂದಿ ಸಾವಿಗೀಡಾಗಿರುವ ಘಟನೆ ಕೇರಳದ ವಯನಾಡ್ (Wayanad) ಜಿಲ್ಲೆಯ ಮಾನಂತವಾಡಿಯಲ್ಲಿ (Mananthavady) ನಡೆದಿದೆ. ಜೀಪಿನಲ್ಲಿ 12 ಮಂದಿ ಇದ್ದರು. ಗಾಯಗೊಂಡ ಮೂವರನ್ನು ವಯನಾಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಚಾಲಕ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ವಯನಾಡ್ ಕಲೆಕ್ಟರ್ ರೇಣು ರಾಜ್ ಖಚಿತಪಡಿಸಿದ್ದಾರೆ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ತಲಪ್ಪುಳ ಕನ್ನೋತ್ ಬೆಟ್ಟದ ಬಳಿ ಅಪಘಾತ ಸಂಭವಿಸಿದೆ. ಜೀಪಿನಲ್ಲಿ ತೋಟದ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಮೃತರನ್ನುರಾಣಿ, ಶಾಂತಾ, ಚಿನ್ನಮ್ಮ, ಲೀಲಾ, ಶಾಜಬಾಬು, ರಬಿಯಾ, ಮೇರಿ ಮತ್ತು ವಸಂತ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬರ ಗುರುತು ಪತ್ತೆಯಾಗಿಲ್ಲ. ಲತಾ, ಉಮಾದೇವಿ ಹಾಗೂ ಚಾಲಕ ಮಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಬಮಾಳ ಎಸ್ಟೇಟ್ ಕಾರ್ಮಿಕರಾಗಿದ್ದಾರೆ ಇವರು. ಜೀಪ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಊಹಿಸಲಾಗುತ್ತಿದೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ತೋಟದ ಕಾರ್ಮಿಕರು ಕೆಲಸ ಮುಗಿಸಿ ಬರುವಾಗ ಈ ಭಾಗದಲ್ಲಿ ಹಲವು ಜೀಪುಗಳು ಸಂಚರಿಸುತ್ತವೆ ಎನ್ನುತ್ತಾರೆ ಸ್ಥಳೀಯರು. ಜೀಪ್ ಆಳವಾದ ಕಂದಕಕ್ಕೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಸುಮಾರು 30 ಮೀಟರ್ ಆಳಕ್ಕೆ ಬಿದ್ದಿದ್ದು, ಸ್ಥಳೀಯರ ನೇತೃತ್ವದಲ್ಲಿ ಮೊದಲ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದ ಮೇರೆಗೆ ಕೋಯಿಕ್ಕೋಡ್‌ನಲ್ಲಿರುವ ಅರಣ್ಯ ಸಚಿವ ಎಕೆ ಶಶೀಂದ್ರನ್ ಅವರು ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಲು ವಯನಾಡ್‌ಗೆ ತೆರಳಿದ್ದಾರೆ. ಅಪಘಾತದ ವರದಿ ತೀವ್ರ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.