Edited By: Ashraf Kammaje
Updated on:Aug 24, 2023 | 2:46 PM

PM Narendra Modi will visit Bangalore on Saturday; ಅದ್ಧೂರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸ್ವಾಗತಕ್ಕೆ ಎಚ್ಎಎಲ್ ಏರ್ಪೋರ್ಟ್ನಲ್ಲಿ 5-6 ಸಾವಿರ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಮೋದಿ ಅವರು ಏರ್ಪೋರ್ಟ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯೂ ಇದೆ.

ಬೆಂಗಳೂರು, ಆಗಸ್ಟ್ 24: ಇಸ್ರೋದ (ISRO) ಐತಿಹಾಸಿಕ ಚಂದ್ರಯಾನ-3 (Chandrayaan 3) ಯೋಜನೆ ಯಶಸ್ವಿಯಾಗಿರುವ ಕಾರಣ ಸಂಸ್ಥೆಯ ವಿಜ್ಞಾನಿಗಳನ್ನು ಅಭಿನಂದಿಸುವ ಸಲುವಾಗಿ ಪ್ರಧಾನಿ(Narendra Modi) ಶನಿವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ ಅಲ್ಲಿಂದ ನೇರ ಬೆಂಗಳೂರಿಗೆ ಬರಲಿದ್ದಾರೆ. ನಂತರ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಅವರ ಜತೆ ಸಭೆ ನಡೆಸಿ ದೆಹಲಿಗೆ ತೆರಳಲಿದ್ದಾರೆ. ಈ ಮಧ್ಯೆ, ಮೋದಿ ಅವರ ಬೆಂಗಳೂರು ಭೇಟಿಯನ್ನು ಪಕ್ಷದ ದೃಷ್ಟಿಯಿಂದ ಪೂರಕವಾಗಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ.

ಪ್ರಧಾನಿ ಬೇಟಿ ವೇಳೆ ಹೆಚ್ಚಿನ ಜನ ಸೇರಿಸುವುದು ಮತ್ತು ಪೀಣ್ಯದಲ್ಲಿ ರೋಡ್ ಶೋ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಈ ವಿಚಾರವಾಗಿ ರಾಜ್ಯ ಘಟಕದ ನಾಯಕರಿಗೆ ವರಿಷ್ಠರಿಂದ ಈಗಾಗಲೇ ಸೂಚನೆ ಬಂದಿದೆ. ಅದ್ಧೂರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸ್ವಾಗತಕ್ಕೆ ಎಚ್ಎಎಲ್ ಏರ್ಪೋರ್ಟ್ನಲ್ಲಿ 5-6 ಸಾವಿರ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಮೋದಿ ಅವರು ಏರ್ಪೋರ್ಟ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯೂ ಇದೆ.

ಪೀಣ್ಯದಲ್ಲಿ ಮೋದಿ ಅವರು ಸುಮಾರು 1 ಕಿಲೋಮೀಟರ್ ರೋಡ್ಶೋ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕೂಡ ಸೂಚನೆ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಶನಿವಾರ ಸಂಜೆ 5.55ಕ್ಕೆ ಎಚ್ಎಎಲ್ ಏರ್ಪೋರ್ಟ್ಗೆ ಆಗಮಿಸಲಿರುವ ಪ್ರಧಾನಿ, ಸಂಜೆ 6.30ರವರೆಗೆ ಏರ್ಪೋರ್ಟ್ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ರಾತ್ರಿ 7 ಗಂಟೆಗೆ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ರಾತ್ರಿ 8 ಗಂಟೆಯವರೆಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ಮೋದಿ ಸಭೆ ನಡೆಸಲಿದ್ದು, ನಂತರ ರಾತ್ರಿ 8.35ಕ್ಕೆ ಬೆಂಗಳೂರಿನಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ.