Edited By: Ashraf Kammaje
Updated on: Aug 23, 2023 | 12:54 PM

ಕಲಬುರಗಿ ಜಿಲ್ಲಾ ಬಿಜೆಪಿ ನಾಯಕ ಮಣಿಕಂಠ ರಾಠೋಡ್ನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಪ್ರಚಾರ ಆರೋಪದಡಿಯಲ್ಲಿ ಅರೆಸ್ಟ್ ಮಾಡಲಾಗಿದ್ದು, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಪೊಲೀಸರ ನಡೆ ಖಂಡಿಸಿ ಬೀದಿಗಿಳಿದಿದ್ದಾರೆ.
ಕಲಬುರಗಿ, (ಆಗಸ್ಟ್ 23):ಕಲಬುರಗಿ (Kalaburagi) ಜಿಲ್ಲಾ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ (manikanta rathod) ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಪ್ರಚಾರ ಆರೋಪ ಪ್ರಕರಣದಡಿಯಲ್ಲಿ ಮಣಿಕಂಠ ರಾಠೋಡ್ನನ್ನು ಕಲಬುರಗಿಯ ಮಾಡಬೂಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋತಿದ್ದ ಮಣಿಕಂಠ ರಾಠೋಡ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಪ್ರಚಾರ ಆರೋಪದಡಿಯಲ್ಲಿ ಚಿತ್ತಾಪುರ ತಾಲೂಕಿನ ಮಾಡಬೂಳ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A 505(1)B ಅಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಮೇರೆಗೆ ಇಂದು (ಆಗಸ್ಟ್ 23) ಪೊಲೀಸರು ಮಣಿಕಂಠ ರಾಠೋಡ್ನನ್ನು ಅರೆಸ್ಟ್ ಮಾಡಿದ್ದಾರೆ.

ಕಲಗುರ್ತಿ ಗ್ರಾಮದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು 1 ತಿಂಗಳಾಗಿದೆ. ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಇದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿಲ್ಲ. ಪೊಲೀಸರು ಪ್ರಿಯಾಂಕ್ ಖರ್ಗೆ ಕೈಗೊಂಬೆಯಾಗಿದ್ದಾರೆ ಎಂದು ಪೊಲೀಸರ ವಿರುದ್ಧ ಮಣಿಕಂಠ ರಾಠೋಡ್ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ತಪ್ಪು ಸಂದೇಶ ರವಾನೆ ಆರೋಪದ ಮೇಲೆ ಮಣಿಕಂಠ ರಾಠೋಡ್ ನನ್ನು ಬಂಧಿಸಲಾಗಿದೆ.

ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಇನ್ನು ಮಣಿಕಂಠ ರಾಥೋಡ್ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಳಿದಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದು, ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಗುರ್ತಿಯ ಯುವಕನ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಕಾರಣವಾಗಿದ್ದಾರೆ. ಹೀಗಾಗಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿಲ್ಲ ಎಂದು ಕಿಡಿಕಾರಿದರು.
