
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರ ಪ್ರಮುಖ ಬೆಂಬಲಿಗರು ಹಾಗೂ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸೋಮವಾರ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ತನ್ಮೂಲಕ ಘರ್‌ವಾಪ್ಸಿಯ ಮೊದಲ ಹಂತಕ್ಕೆ ಚಾಲನೆ ದೊರಕಿತು.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಸಭೆಯಲ್ಲಿ ಸೋಮಶೇಖರ್ ಅವರ ಆಪ್ತರಾದ ರಾಜಣ್ಣ, ಆರ್ಯ ಶ್ರೀನಿವಾಸ್, ಶಿವಮಾದಯ್ಯ, ಹನುಮಂತಯ್ಯ, ಚಿಕ್ಕರಾಜು ಹಾಗೂ ಜೆಡಿಎಸ್ ಮುಖಂಡರಾದ ಉಮಾಶಂಕರ್, ರಘು, ಸತೀಶ್ ಮತ್ತಿತರರನ್ನು ಪಕ್ಷದ ಬಾವುಟ ನೀಡಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಇದೇ ವೇಳೆ ಬಿಜೆಪಿಯ ಯಶವಂತಪುರ ಕ್ಷೇತ್ರದ ನೂರಾರು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇದರೊಂದಿಗೆ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಅವರು ಪಕ್ಷ ಸೇರುವುದು ನಿಚ್ಚಳವಾದಂತಾಗಿದೆ.

ಸೋಮಶೇಖರ್ ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿದ್ದು ಹತಾಶೆಗೊಂಡಿರುವ ಎಲ್ಲರನ್ನೂ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬನ್ನಿ. ಒಬ್ಬೊಬ್ಬರು ಕನಿಷ್ಠ ಹತ್ತು ಮಂದಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿ ಎಂದು ಕರೆ ನೀಡಿದರು. ಜತೆಗೆ, ದೊಡ್ಡ ದೊಡ್ಡ ನಾಯಕರೊಂದಿಗೆ ನಾನು ಮಾತನಾಡುತ್ತೇನೆ’ ಎನ್ನುವ ಮೂಲಕ ಘರ್ ವಾಪ್ಸಿ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ ಎಂಬ ಸೂಚನೆ ನೀಡಿದರು.

ಅಲ್ಲದೆ, ‘ಈ ಕಾರ್ಯಕ್ರಮದಲ್ಲಿ ನಿಮ್ಮ ಜತೆ ಸೋಮಶೇಖರ್ ಕೂಡ ಪಕ್ಷ ಸೇರಬೇಕಾಗಿತ್ತು. ಸೋಮಶೇಖರ್‌ಗೆ ವಿಧಾನಸಭೆ ಚುನಾವಣೆಗೂ ಮೊದಲೇ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದೆ. ಅಲ್ಲದೆ, ರೈಲು ಹೊರಟ ಮೇಲೆ ಟಿಕೆಟ್ ತೆಗೆದುಕೊಳ್ಳಬೇಡ ಎಂದು ಎಚ್ಚರಿಸಿದ್ದೆ. ಆದರೆ, ಈಗ ಸೋಮಶೇಖರ್ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ನನ್ನ ಜತೆಗೂ ಮಾತನಾಡಿದ್ದು, ಆ.26ರಂದು ಕ್ಷೇತ್ರಕ್ಕೆ ಬರುವ ಭರವಸೆ ನೀಡಿದ್ದೇನೆ. ಏಕೆಂದರೆ, ರಾಜಕಾರಣ ಬೇರೆ, ಅಭಿವೃದ್ಧಿ ಬೇರೆ. ಮುಂದೆ ಏನಾಗುತ್ತೋ ನೋಡೋಣ’ ಎಂದು ಸೂಚ್ಯವಾಗಿ ಹೇಳಿದರು.