
ಬಾಕು: ಅಝರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ನ (Chess World Cup 2023) ಸೆಮಿಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ ಜಯ ಸಾಧಿಸುವ ಮೂಲಕ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ (Praggnanandhaa) ಫೈನಲ್ಗೆ ಎಂಟ್ರಿಕೊಟ್ಟಿದ್ದಾರೆ. ಈ ಮೂಲಕ ಚೆಸ್ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ಹಿಂದೆ 2000 ಹಾಗೂ 2002ರ ಇಸವಿಯಲ್ಲಿ ವಿಶ್ವನಾಥನ್ ಆನಂದ್ ವಿಶ್ವ ಚಾಂಪಿಯನ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು. ಇದೀಗ ಅಂತಿಮವಾಗಿ ಫ್ಯಾಬಿಯಾನೊ ಕರುವಾನಾ ಅವರನ್ನ 3.5-2.5 ರಿಂದ ಸೋಲಿಸಿ ಪ್ರಜ್ಞಾನಂದ ಫೈನಲ್ಗೆ ಪ್ರವೇಶಿಸಿದ್ದಾರೆ

ಫೈನಲ್ನಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಪ್ರಜ್ಞಾನಂದ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಫೈನಲ್ನಲ್ಲಿ ಗೆದ್ದರೆ ಪ್ರಜ್ಞಾನಂದ ಹೊಸ ಇತಿಹಾಸ ಬರೆಯಲಿದ್ದಾರೆ.

ಶನಿವಾರ ನಡೆದ ಮೊದಲ ಸುತ್ತು ಡ್ರಾನಲ್ಲಿ ಅಂತ್ಯಗೊಂಡರೆ, ಭಾನುವಾರ ನಡೆದ ಎರಡನೇ ಸುತ್ತು 47 ನಡೆಗಳ ಬಳಿಕ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಪಂದ್ಯದ ಫಲಿತಾಂಶಕ್ಕೆ ಸೋಮವಾರ ಟೈ ಬ್ರೇಕರ್ ಸುತ್ತು ನಡೆಯಿತು.