
ಡಿಸ್ಪುರ: ಉಗ್ರಗಾಮಿ ಸಂಘಟನೆಗಳಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ULFA) (Independent)) ಮತ್ತು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN) /ಜೆಪಿಆರ್‌ಎನ್ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಬಹಿಷ್ಕರಿಸಲು ಕರೆ ನೀಡಿದ್ದು, ಈ ಹಿನ್ನೆಲೆ ಅಸ್ಸಾಂ (Assam) ರಾಜ್ಯದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ನಾವು ಪ್ರದೇಶದ ಪ್ರಾಬಲ್ಯ ಮತ್ತು ನಾಕಾ ತಪಾಸಣೆ ಸೇರಿದಂತೆ ಎಲ್ಲಾ ನಿಯಮಿತ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಯಾವುದೇ ಅಡ್ಡಿಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಗುವಾಹಟಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಇತರ ಸಚಿವರು ಮತ್ತು ಉನ್ನತ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ಭದ್ರತೆಯನ್ನು ಪರಿಶೀಲಿಸಿದ್ದು, ಶಾಂತಿಯುತ ಆಚರಣೆಗೆ ಬೇಕಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 12ರಂದು ಉಲ್ಫಾ ಸಂಘಟನೆಯು ಇ- ಮೇಲ್ (E-Mail) ಮೂಲಕ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಜನರನ್ನು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸುವಂತೆ ಕೇಳಿಕೊಂಡಿತ್ತು. ಆಗಸ್ಟ್ 15ರ ಸಂಜೆ 6 ಗಂಟೆಯವರೆಗೆ ತುರ್ತು ಸೇವೆಗಳು, ಮಾಧ್ಯಮ ಸೇವೆಗಳು ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಸಾರ್ವತ್ರಿಕ ಮುಷ್ಕರದ ವ್ಯಾಪ್ತಿಯಿಂದ ಹೊರಗಿಟ್ಟು ಬಂದ್‌ಗೆ ಕರೆ ನೀಡಿದೆ.