| Edited By: Ashraf Kammaje
Updated on:Aug 13, 2023 | 7:11 AM

ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಡೆದಿದೆ.
ಚಿತ್ರದುರ್ಗ: ಭೀಕರ ಅಪಘಾತ (Accident) ಸಂಭವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ (Chitradurga) ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಡೆದಿದೆ. ಖಾಸಗಿ ಬ್ಯಾಂಕ್ ನೌಕರ ಸಂಗನಬಸವ (36), ಪತ್ನಿ ರೇಖಾ(29), ಪುತ್ರ ಅಗಸ್ತ್ಯ(7), ಸಂಬಂಧಿ ಭೀಮಾಶಂಕರ್ (26) ಮೃತ ದುರ್ದೈವಿಗಳು. ಮೃತ ದಂಪತಿಯ ಮತ್ತೋರ್ವ ಪುತ್ರ ಆದರ್ಶ (3) ಹಾಗೂ ಪುತ್ರಿ ಅನ್ವಿಕಾ (5) ಮತ್ತು ಕಾರು ಚಾಲಕನಿಗೆ ಗಾಯಗಳಾಗಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಗ್ರಾಮದವರಾದ ಈ ಏಳು ಜನರು ರಜೆ ಹಿನ್ನೆಲೆಯಲ್ಲಿ ಕಾರಿನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಕುಟುಂಬ ನಿನ್ನೆ (ಆ.12) ರಾತ್ರಿ 11 ಗಂಟೆಗೆ ಮನೆಯಿಂದ ಕಾರಿನಲ್ಲಿ ಹೊರಟಿತ್ತು. ಇಂದು (ಆ.13) ನಸುಕಿನ ಜಾವ 3:30ಕ್ಕೆ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದು ಮೂವರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಎಸ್ಪಿ ಕೆ.ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

