
ದೆಹಲಿಯಲ್ಲಿ ಭೀಕರ ಅನಿಲ ದುರಂತ ಸಂಭವಿಸಿದೆ. ಗ್ಯಾಸ್ ಲೀಕ್ ಆದರ ಕಾರಣ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇದೀಗ 28ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ನವದೆಹಲಿ(ಆ.11) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನಿಲ ದುರಂತ ಸಂಭವಿಸಿದೆ. ದೆಹಲಿಯ ನರೈನಾ ಏರಿಯಾ ಬಳಿ ಇರುವ ಮುನ್ಸಿಪಲ್ ಶಾಲಾ ಬಳಿ ಗ್ಯಾಸ್ ಲೀಕ್ ಅನಾಹುತ ಸಂಭವಿಸಿದೆ. ಇದರ ಪರಿಣಾಮ ಮುನ್ಸಿಪಲ್ ಶಾಲೆಯ 28ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ 19 ವಿದ್ಯಾರ್ಥಿಗಳನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 9 ವಿದ್ಯಾರ್ಥಿಗಳನ್ನು ಆಚಾರ್ಯ ಶ್ರೀ ಭಿಕ್ಷು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಇದೀಗ ಆಸ್ಪತ್ರೆಗೆ ದೌಡಾಯಿಸಿದೆ.

ಶಾಲಾ ಅವರಣ ಪಕ್ಕದಲ್ಲೇ ಗ್ಯಾಸ್ ಲೀಕ್ ಆಗಿದೆ. ಈ ಗ್ಯಾಸ್ ಮಿಶ್ರಿತ ವಾಯು ಸೇವನೆಯಿಂದ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಇದೀಗ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯಾಧಿಕಾರಿಗಳ ತಂಡ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಚೇತರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಕೆಲ ಸಮಯ ಬೇಕಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಆಸ್ಪತ್ರೆ ದೌಡಾಯಿಸಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಶಾಲಾ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಮಕ್ಕಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಗ್ಯಾಸ್ ಸೋರಿಕೆಯಿಂದ ಮಕ್ಕಳು ಅಸ್ವಸ್ಥರಾಗಿರುವ ಸಾಧ್ಯತೆಯನ್ನು ವೈದ್ಯರು ಹೇಳಿದ್ದಾರೆ. ಇತ್ತ ಮಕ್ಕಳು ಸೇವಿಸಿದ ಆಹಾರದ ಕುರಿತು ವಿಚಾರಣೆಗಳು ನಡೆಯುತ್ತಿದೆ.
