
ನವದೆಹಲಿ: ದೇಶದ ಮುಖ್ಯ ಚುನಾವಣಾ ಆಯುಕ್ತರನ್ನು (Chief Election Commissioner) ನೇಮಿಸುವ ಪ್ರಕ್ರಿಯೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (Chief Justice of India) ಅವರನ್ನು ಹೊರಗಿಡುವ ಸಂಬಂಧ ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವೆಗಳ ಷರತ್ತುಗಳು ಮತ್ತು ಅಧಿಕಾರ ಅವಧಿ) ಮಸೂದೆ 2023 ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal) ಮಂಡಿಸಿದರು.
ಮಸೂದೆಯಲ್ಲಿ ಏನಿದೆ?
ಚುನಾವಣಾಧಿಕಾರಿಗಳನ್ನು ಒಳಗೊಂಡಿರುವ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಕು. ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದೇ ಇದ್ದರೆ ಅತಿ ದೊಡ್ಡ ಪಕ್ಷದ ನಾಯಕ) ಮತ್ತು ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಸಂಪುಟ ಸಚಿವರು ಇದರ ಸದಸ್ಯರಾಗಿರುತ್ತಾರೆ. ಪ್ರಧಾನ ಮಂತ್ರಿ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಚುನಾವಣಾ ಆಯುಕ್ತರಾಗುವ ಅಧಿಕಾರಿ ಭಾರತ ಸರ್ಕಾರದ ಕಾರ್ಯದರ್ಶಿಗೆ ಸಮಾನವಾದ ಹುದ್ದೆಯನ್ನು ಹೊಂದಿರಬೇಕು ಎಂಬ ಅಂಶ ಮಸೂದೆಯಲ್ಲಿದೆ.

ಹಿಂದೆ ಹೇಗಿತ್ತು?
ಸಂವಿಧಾನದ 324ನೇ ವಿಧಿಯ ಅನುಸಾರ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರನ್ನು ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ನೇಮಿಸುತ್ತಿದ್ದರು.

ಸುಪ್ರೀಂ ತೀರ್ಪು ಏನಿತ್ತು?
ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆ ಬೇಕು ಎಂದು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು. ನ್ಯಾ. ಕೆ.ಎಂ ಜೋಸೆಫ್, ನ್ಯಾ. ಅಜಯ್ ರಸ್ತೋಗಿ, ನ್ಯಾ. ಅನಿರುದ್ಧ ಬೋಸ್, ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ. ಸಿ.ಟಿ ರವಿ ಕುಮಾರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಈ ಅರ್ಜಿ ವಿಚಾರಣೆ ನಡೆಸಿ ಈ ವರ್ಷದ ಮಾರ್ಚ್‌ನಲ್ಲಿ ತೀರ್ಪು ಪ್ರಕಟಿಸಿತ್ತು.
ಈ ತೀರ್ಪಿನಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದೇ ಇದ್ದರೆ ಅತಿ ದೊಡ್ಡ ಪಕ್ಷದ ನಾಯಕ) ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸದಸ್ಯರಾಗಿರುವ ಸಮಿತಿಯ ಸಲಹೆಯಂತೆ ರಾಷ್ಟ್ರಪತಿ ನೇಮಕ ಮಾಡಬೇಕು ಎಂದು ಹೇಳಿತ್ತು.
ಸ್ವತಂತ್ರ ವ್ಯಕ್ತಿ ಅಧಿಕಾರದಲ್ಲಿರುವವರಿಗೆ ಅಕ್ರಮ ನಡೆಯುವುದಿಲ್ಲ. ಹಲವಾರು ದಶಕಗಳು ಕಳೆದಿದ್ದರೂ ರಾಜಕೀಯ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಮಾಡಲು ಪ್ರತ್ಯೇಕ ಕಾನೂನನ್ನು ಪರಿಚಯಿಸಿಲ್ಲ. ಚುನಾವಣಾ ಆಯುಕ್ತರ ನೇಮಕದ ಕುರಿತಂತೆ ಸಂಸತ್ತು ಕಾಯ್ದೆ ರೂಪಿಸುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.
ಅಂದೇ ಪ್ರಶ್ನೆ ಎದ್ದಿತ್ತು
ಒಂದು ವೇಳೆ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧವೇ ಯಾವುದಾದರೂ ಗಂಭೀರ ಆರೋಪ ಬಂದಾಗ ಆ ಪ್ರಕರಣದ ವಿಚಾರಣೆಯನ್ನು ಸಿಜೆಐ ನಡೆಸಬಹುದೇ ಎಂಬ ಪ್ರಶ್ನೆ ಎದ್ದಿತ್ತು. ಯಾಕೆಂದರೆ ಸಿಜಿಐ ನೇಮಕ ಮಾಡಿದ ಸಮಿತಿಯೇ ಶಿಫಾರಸು ಮಾಡಿರುವಾಗ ಸಿಜಿಐ ನಡೆಸುವುದು ಸರಿಯೇ? ಸಿಜೆಐ ನ್ಯಾಯಾಂಗದ ವಿಚಾರಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳಬೇಕು. ಕಾರ್ಯಾಂಗದ ವಿಚಾರಕ್ಕೆ ಬಂದರೆ ಮುಂದೆ ಬೇರೆ ವಿಷಯಗಳು ಸಿಜೆಐ ಮುಂದೆ ಬಂದರೆ ಏನು ಎಂಬ ಪ್ರಶ್ನೆಯನ್ನು ಕಾನೂನು ಪಂಡಿತರು ಎತ್ತಿದ್ದರು.