
ನಿನ್ನೆ ರಾಜ್ಯಸಭೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಮಸೂದೆ ರಾಜ್ಯಸಭೆಯಲ್ಲಿಯೂ ಪಾಸಾಗಿ ಕಾಯ್ದೆಯಾಗಿ ಬದಲಾಯ್ತು. ಈ ಮಸೂದೆಯ ವಿರುದ್ಧ ಮತ ಚಲಾಯಿಸುವ ಸಲುವಾಗಿ ದೇಶದ ಮಾಜಿ ಪ್ರಧಾನಿ 90 ವರ್ಷದ ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯ ಮೂಲಕ ರಾಜ್ಯಸಭಾ ಕಲಾಪಕ್ಕೆ ಆಗಮಿಸಿದ್ದರು
ನವದೆಹಲಿ: ನಿನ್ನೆ ರಾಜ್ಯಸಭೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಮಸೂದೆ ರಾಜ್ಯಸಭೆಯಲ್ಲಿಯೂ ಪಾಸಾಗಿ ಕಾಯ್ದೆಯಾಗಿ ಬದಲಾಯ್ತು. ಈ ಮಸೂದೆಯ ವಿರುದ್ಧ ಮತ ಚಲಾಯಿಸುವ ಸಲುವಾಗಿ ದೇಶದ ಮಾಜಿ ಪ್ರಧಾನಿ 90 ವರ್ಷದ ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯ ಮೂಲಕ ರಾಜ್ಯಸಭಾ ಕಲಾಪಕ್ಕೆ ಆಗಮಿಸಿದ್ದರು. ರಾಜ್ಯಸಭೆಯಲ್ಲಿ ಆಡಳಿತರೂಢ ಬಿಜೆಪಿಗೆ ಬಹುಮತದ ಕೊರತೆಯಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಈ ಬಿಲ್‌ಗೆ ತಡೆ ಬೀಳಲೇಬೇಕೆಂಬ ದೃಷ್ಟಿಯಿಂದ ಕಾಂಗ್ರೆಸ್ ತನ್ನ ವಯೋವೃದ್ಧ ಹಿರಿಯ ನಾಯಕನನ್ನು ಕೂಡ ಕಲಾಪಕ್ಕೆ ಬರುವಂತೆ ಮಾಡಿತ್ತು. ಆದರೆ ಅಲ್ಲಿ ಜಗನ್ ನೇತೃತ್ವದ ವೈಎಸ್‌ಆರ್ ಸೇರಿದಂತೆ ಕೆಲ ಪಕ್ಷಗಳು ಆಡಳಿತರೂಢ ಬಿಜೆಪಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಸಲೀಸಾಗಿ ರಾಜ್ಯಸಭೆಯಲ್ಲೂ ಪಾಸಾಯ್ತು. ಈ ಮಧ್ಯೆ ವಯೋವೃದ್ಧರಾದ ಮನಮೋಹನ್ ಸಿಂಗ್ ಅವರನ್ನು ಕೇವಲ ವಿಧೇಯಕಕ್ಕೆ ವೋಟು ಹಾಕುವುದಕ್ಕಾಗಿ ಗಾಲಿ ಕುರ್ಚಿಯಲ್ಲಿ ಕರೆ ತಂದ ಕಾಂಗ್ರೆಸ್ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಆದರೆ ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.

ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (ತಿದ್ದುಪಡಿ) ಮಸೂದೆ-2023 ರ ಮಂಡನೆ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಆಗಮಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಧನ್ಯವಾದ ತಿಳಿಸಿದರು. ಇಂದು, ರಾಜ್ಯಸಭೆಯಲ್ಲಿ, ಡಾ. ಮನಮೋಹನ್ ಸಿಂಗ್, (Dr.Manmohan Singh) ಅವರು ಸಮಗ್ರತೆಯ ದಾರಿದೀಪವಾಗಿ ನಿಂತರು ಹಾಗೂ ವಿಶೇಷವಾಗಿ ಕಪ್ಪು ಸುಗ್ರೀವಾಜ್ಞೆಯ ವಿರುದ್ಧ ಮತ ಚಲಾಯಿಸಲು ಬಂದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಅವರ ಅಚಲವಾದ ಬದ್ಧತೆಯು ಇತರರಿಗೆ ಸ್ಫೂರ್ತಿಯಾಗಿದೆ. ಅವರ ಅಮೂಲ್ಯ ಬೆಂಬಲಕ್ಕಾಗಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ರಾಘವ್ ಚಡ್ಡಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.

ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಡಾ. ಸಿಂಗ್ ಅವರ ಪ್ರಜಾಪ್ರಭುತ್ವದ ಬಗೆಗಿನ ಈ ಸಮರ್ಪಣೆ ಈ ದೇಶದ ಸಂವಿಧಾನದ ಮೇಲಿನ ಅವರ ನಂಬಿಕೆಗೆ ಸಾಕ್ಷಿಯಾಗಿದೆ. ಬಿಜೆಪಿ ತನ್ನ ಹಿರಿಯರನ್ನು ಮಾನಸಿಕ ಕೋಮಾಕ್ಕೆ ತಳ್ಳಿದೆ. ಆದರೆ ನಮ್ಮ ಹಿರಿಯರು ನಮಗೆ ಸ್ಫೂರ್ತಿ, ಅವರು ನಮ್ಮ ಧೈರ್ಯವಾಗಿದ್ದಾರೆ. ನಿಮ್ಮ ಪಕ್ಷದ ಯಜಮಾನನಿಗೆ ಏನನ್ನಾದರು ಕಲಿಯಲು ಹೇಳಿ ಎಂದು ಕಾಂಗ್ರೆಸ್ ನಾಯಕಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ನಿರ್ವಹಿಸುವ ಸುಪ್ರಿಯಾ ಶ್ರೀನಾಟೆ (Supriya Srinate) ತಿರುಗೇಟು ನೀಡಿದ್ದಾರೆ.

ಸಿಂಗ್ ಅವರ ಹೊರತಾಗಿ ವಿರೋಧ ಪಕ್ಷ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾದ (Jharkhand Mukti Morcha) ನಾಯಕ ಶಿಬು ಸೊರೇನ್ (Shibu Soren) ಅವರನ್ನು ಕೂಡ ರಾಜ್ಯಸಭೆಗೆ ಕರೆ ತಂದಿತ್ತು. ವಿಪಕ್ಷಗಳ ಈ ಸಂಘಟಿತ ಪ್ರಯತ್ನದ ನಂತರವೂ ಈ ಬಿಲ್ ರಾಜ್ಯಸಭೆಯಲ್ಲಿ ಸಲೀಸಾಗಿ ಪಾಸಾಯ್ತು. ಮಸೂದೆ ಪರ 131 ಮತ ಬಂದರೆ, ಮಸೂದೆ ವಿರುದ್ಧ ತೊಡತಟ್ಟಿದ್ದ ವಿಪಕ್ಷ ಇಂಡಿಯಾ ಕೂಟಕ್ಕೆ ಕೇವಲ 102 ಮತ ಬಂದವು. ಇತ್ತೀಚೆಗೆ ಮಸೂದೆಗೆ ಲೋಕಸಭೆ ಕೂಡ ಅಂಗೀಕಾರ ನೀಡಿತ್ತು. ಹೀಗಾಗಿ ಸುಗ್ರೀವಾಜ್ಞೆಗೆ ಈಗ ಶಾಶ್ವತವಾಗಿ ಕಾನೂನು ಸ್ವರೂಪ ಸಿಕ್ಕಿದೆ.