
ಗ್ಯಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಇದೇ ವೇಳೆ ಸರ್ವೆಗೆ ತಡೆ ಕೋರಿ ಮಸೀದಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಮಸೀದಿಯ ಕುರಿತು ಹಿಂದೂ ಸಮಿತಿ ನೀಡಿದ ದೂರಿನ ಬಗ್ಗೆ ಪತ್ತೆ ಹಚ್ಚಲು ಭಾರತೀಯ ಪುರಾತತ್ವ ಇಲಾಖೆ ನಡೆಸುತ್ತಿದ್ದ ಸಮೀಕ್ಷೆಗೆ ಆ.3ರವರೆಗೆ ಅಲಹಾಬಾದ್ ಹೈಕೋರ್ಚ್ ತಡೆ ನೀಡಿತ್ತು. ಇದೇ ವೇಳೆ ಸಮೀಕ್ಷೆ ಮಾಡಬೇಕೋ ಬೇಡವೋ ಎಂಬ ಕುರಿತ ತೀರ್ಪನ್ನು ಆ.3ರವರೆಗೆ ಕಾಯ್ದಿರಿಸಿತ್ತು. ಇದೀಗ ತೀರ್ಪು ಪ್ರಕಟಿಸಿದ ಹೈಕೋರ್ಟ್, ಸರ್ವೆಗೆ ಅನುಮತಿ ನೀಡಿದೆ.

ವಾರಣಾಸಿ ಕೋರ್ಟ್ ನೀಡಿದ್ದ ಸಮೀಕ್ಷೆ ಆದೇಶವನ್ನು ಪ್ರಶ್ನಿಸಿ ಮಸೀದಿ ಪರ ಮುಸ್ಲಿಂ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಜು.26ರವರೆಗೆ ಸುಪ್ರೀಂಕೋರ್ಚ್ ನೀಡಿದ್ದ ತಡೆಯನ್ನು ಒಂದು ದಿನ ಹೆಚ್ಚಳ ಮಾಡಿದ್ದ ಹೈಕೋರ್ಚ್ ಹೆಚ್ಚಿನ ವಿವರ ಸಲ್ಲಿಸುವಂತೆ ಎಎಸ್ಐಗೆ ಸೂಚಿಸಿತ್ತು. ಜುಲೈ 27 ರಂದು ಮತ್ತೆ ವಿಚಾರಣೆ ನಡೆಸಿದ ಕೋರ್ಚ್ ಯಥಾಸ್ಥಿತಿಯನ್ನು ಆ.3ವರೆಗೆ ಮುಂದುವರೆಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.ಜುಲೈ 27 ವಿಚಾರಣೆಯ ಸಮಯದಲ್ಲಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಹಾಗೂ ಹಿಂದೂ ಪರವಾದ ವಾದಗಳನ್ನು ಆಲಿಸಿತು.
