
ಕಳೆದ 3 ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣದಲ್ಲಿ ರಾಜ್ಯ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಮತ್ತೆ ಕಿಡಿಕಾರಿರುವ ಸುಪ್ರೀಂಕೋರ್ಟ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ತಪರಾಕಿ ಹಾಕಿದೆ.
ನವದೆಹಲಿ: ಕಳೆದ 3 ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣದಲ್ಲಿ ರಾಜ್ಯ ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಮತ್ತೆ ಕಿಡಿಕಾರಿರುವ ಸುಪ್ರೀಂಕೋರ್ಟ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ತಪರಾಕಿ ಹಾಕಿದೆ. ಜೊತೆಗೆ ಹಿಂಸಾಚಾರದ ಘಟನೆಗಳ ಬಗ್ಗೆ ರಾಜ್ಯ ಪೊಲೀಸರ ತನಿಖೆ ಸಂಪೂರ್ಣ ವಿಳಂಬವಾಗಿದೆ ಮತ್ತು ಆಲಸಿತನದ್ದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಮುಂದಿನ ಸೋಮವಾರ ನಡೆಯಲಿರುವ ವಿಚಾರಣೆ ವೇಳೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಖುದ್ದು ಹಾಜರಿರಬೇಕು ಎಂದು ಸೂಚಿಸಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸೋಮವಾರದಿಂದ ಆರಂಭಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಹಿಂಸಾಚಾರ ಸಂಬಂಧ ಈವರೆಗೆ ಎಷ್ಟುಎಫ್‌ಐಆರ್ ದಾಖಲಿಸಲಾಗಿದೆ, ಎಷ್ಟುಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಮಂಗಳವಾರ ಸಲ್ಲಿಸಬೇಕು ಎಂದು ಸೂಚಿಸಿತ್ತು.

ಮಂಗಳವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರ (central Govt) ಮತ್ತು ಮಣಿಪುರ ಸರ್ಕಾರದ (Manipur Govt) ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta), ಇದುವರೆಗೂ ರಾಜ್ಯದಲ್ಲಿ 6523 ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರು ಮಹಿಳೆಯರ ನಗ್ನ ಪರೇಡ್ ಪ್ರಕರಣದಲ್ಲಿ ‘ಶೂನ್ಯ ಎಫ್‌ಐಆರ್’ ದಾಖಲಿಸಲಾಗಿದೆ. ಓರ್ವ ಅಪ್ರಾಪ್ತ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತನಿಖೆ ಅದೆಷ್ಟು ಆಲಸಿತನದಿಂದ ಕೂಡಿದೆಯೆಂದರೆ, ಘಟನೆ ನಡೆದ ಹಲವು ದಿನಗಳ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ, ಯಾರನ್ನೂ ಬಂಧಿಸಿಲ್ಲ, ಜೊತೆಗೆ ಹೇಳಿಕೆಗಳನ್ನೂ ದಾಖಲಿಸಿಲ್ಲ. ಇದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳು ಪೂರ್ಣ ಕುಸಿತಗೊಂಡಂತೆ ಕಾಣುತ್ತದೆ. ರಾಜ್ಯ ಪೊಲೀಸರು ಪೂರ್ಣ ಹಿಡಿತ ಕಳೆದುಕೊಂಡಿದ್ದಾರೆ. ಹೀಗಾಗಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ ಸೋಮವಾರ ಸ್ವತಃ ಡಿಜಿಪಿ ಖುದ್ದು ಹಾಜರಿರಬೇಕು’ ಎಂದು ಸೂಚಿಸಿತು.
ಕಳೆದ ಸೋಮವಾರದ ವಿಚಾರಣೆ ವೇಳೆ ‘ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿದ ಘಟನೆ ಅತ್ಯಂತ ‘ಭಯಾನಕ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ನ್ಯಾಯಪೀಠ, ಹಿಂಸಾಚಾರದ ತನಿಖೆಯನ್ನು ರಾಜ್ಯದ ಪೊಲೀಸರ ಕೈಯಿಂದ ಹಿಂಪಡೆದು ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ಅಥವಾ ನಿವೃತ್ತ ಜಡ್ಜ್‌ಗಳ ಸಮಿತಿ ನೇಮಕ ಮಾಡುವ ಸುಳಿವು ನೀಡಿತ್ತು.