
Edited By: Ashraf Kammaje
Updated on:Aug 01, 2023 | 6:25 PM
ಸಿದ್ದರಾಮಯ್ಯ ಅವರು ಅಹವಾಲು ಆಲಿಸದಿರುವುದಕ್ಕೆ ಕೋಪಗೊಂಡ ಜನರು, ‘ನಾವು ನಿಮ್ಮನ್ನು ನಂಬಿದ್ದೇವೆ, ನಮಗೆ ಶಾಶ್ವತ ಪರಿಹಾರ ಕೊಡಿಸಿ’ ಎಂದು ಖಾದರ್ ಎದುರು ಅಸಮಾಧಾನ ತೋಡಿಕೊಂಡರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಕಡಲ್ಕೊರೆತ ಪೀಡಿತ ಪ್ರದೇಶ ಬಟ್ಟಪಾಡೆ ಕಡಲತೀರಕ್ಕೆ (Batapady Beach) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಸ್ಥಳೀಯ ನಿವಾಸಿಗಳು ಮುಖ್ಯಮಂತ್ರಿ ಹಾಗೂ ಸ್ಪೀಕರ್ ಎದುರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು. ಸಿದ್ದರಾಮಯ್ಯ ಅವರು ಅಹವಾಲು ಆಲಿಸದಿರುವುದಕ್ಕೆ ಕೋಪಗೊಂಡ ಜನರು, ‘ನಾವು ನಿಮ್ಮನ್ನು ನಂಬಿದ್ದೇವೆ, ನಮಗೆ ಶಾಶ್ವತ ಪರಿಹಾರ ಕೊಡಿಸಿ’ ಎಂದು ಖಾದರ್ ಎದುರು ಅಸಮಾಧಾನ ತೋಡಿಕೊಂಡರು.

ಖಾದರ್ ಸರ್, ನೀವು ಕೆಲಸ ಮಾಡಿದ್ದರಿಂದಲೇ ನಮ್ಮ ಮನೆಗಳು ಉಳಿದಿವೆ. ಆದರೆ, ಈಗ ಸಮಸ್ಯೆ ಹೆಚ್ಚಾಗಿದೆ, ತಕ್ಷಣ ಕ್ರಮಕೈಗೊಳ್ಳಿ’ ಎಂದು ಸ್ಥಳೀಯರು ಮನವಿ ಮಾಡಿದರು.
‘ಮುಖ್ಯಮಂತ್ರಿ ಬರುತ್ತಾರೆ ಎಂದು ಬೆಳಿಗ್ಗೆಯಿಂದ ಕಾದಿದ್ದೆವು’
ನಾವು ಮುಖ್ಯಮಂತ್ರಿ ಬರುತ್ತಾರೆ ಎಂದು ಬೆಳಿಗ್ಗೆಯಿಂದ ಕಾದಿದ್ದೆವು. ಕಡಲು ಕೊರೆತವಾಗಿ ಮನೆ ಕುಸಿಯುತ್ತಿದೆ. ನಮ್ಮ ಸಮಸ್ಯೆ ಬಗ್ಗೆ ಸಿಎಂಗೆ ಹೇಳೋಕು ಅವಕಾಶ ನೀಡಲಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಬೊಮ್ಮಾಯಿ ಸಿಎಂ ಆಗಿದ್ದಾಗ ಇಲ್ಲಿಗೆ ಬಂದಿದ್ದಾಗ ರಾತ್ರಿ ಆಗಿತ್ತು ಆದರೂ ಜನರ ಜೊತೆ ಮಾತನಾಡಿದ್ದರು. ಆದರೆ ಇವರು ಹಾಗೆ ಬಂದು ಹೀಗೆ ಹೋದರು ಎಂದು ಜನ ಸ್ಥಳೀಯ ಕಾಂಗ್ರೆಸ್ ನಾಯಕರ ಎದುರು ಅಸಮಾಧಾನ ತೋಡಿಕೊಂಡರು. ನಾವು ನಿಮ್ಮನ್ನ ನಂಬಿದ್ದೇವೆ ಏನು ಮಾಡ್ತಿರೋ ಮಾಡಿ. ಇಲ್ಲಿ ಕಡಲು ತೀರದಲ್ಲಿ ಮೀನುಗರರು ಉಳಿಯಬೇಕು. ನಾವು ಏನಾದರೂ ಮಾಡಲು ಹೋದರೆ ಅನುಮತಿ ನೀಡಲ್ಲ. ಬದಲಾಗಿ ದೊಡ್ಡದಾದ ರೆಸಾರ್ಟ್ ಬಂದರೆ ಅವಕಾಶ ಸಿಗುತ್ತೆ. ನಮ್ಮನ್ನ ಗಂಜಿ ಕೇಂದ್ರಕ್ಕೆ ಹಾಕೋದು ಬೇಡಾ, ನಾವು ಬದುಕೋಕೆ ಅವಕಾಶ ನೀಡಿ ನಾವು ಗಂಜಿ ಮಾಡಿಕೊಳ್ತೇವೆ. ನಮ್ಮ ಸರ್ಕಾರ ಬಂದರೆ ಸಮಸ್ಯೆ ಬಗೆ ಹರಿಸುತ್ತೇವೆ ಎಂದಿದ್ದಿರಿ. ಈಗ ನಿಮ್ಮ ಸರ್ಕಾರ ಬಂದಿದೆ ಕೆಲಸ ಮಾಡಿ. ಬರೀ ಮಾತು ಬೇಡಾ, ತಕ್ಷಣ ಏನು ಮಾಡಬೇಕೊ ಆ ಕೆಲಸ ಮಾಡಿ ಎಂದು ಜನ ಒತ್ತಾಯಿಸಿದರು.

ಕಡಲ್ಕೊರೆತದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಈ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಕಡಲ್ಕೊರೆತ ಆಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪರಿಶೀಲಿಸುತ್ತಿದ್ದೇವೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆ ಇದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬಟ್ಟಪಾಡೆ ಕಡಲತೀರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಇದಕ್ಕೂ ಮುನ್ನ ಯುಟಿ ಖಾದರ್ ಹಾಗೂ ಸಚಿವ ದಿನೇಶ್ ಗುಂಡೂರಾವ್ ಕಡಲ್ಕೊರತೆ ಪೀಡಿತ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪರಿಶೀಲನೆ ನಡೆಸಿದ್ದರು.

ಉಡುಪಿ ಕಾಲೇಜು ಪ್ರಕರಣ ಎಸ್ಐಟಿ ತನಿಖೆ ಇಲ್ಲ; ಸಿದ್ದರಾಮಯ್ಯ
ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣದ ಬಗ್ಗೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಪ್ರಕರಣದ ಬಗ್ಗೆ ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ. ಅದು ಮೊದಲು ಮುಕ್ತಾಯವಾಗಲಿ. ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಹಾಕಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಪ್ರತಿನಿಧಿ ತಿಳಿಸಿದ್ದಾರೆ. ತನಿಖಾ ವರದಿ ಪ್ರಕಟವಾಗಲಿ. ನಂತರ ನಾವು ಈ ವಿಷಯದ ಬಗ್ಗೆ ಮಾತನಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.