
2022ರ ಫೆಬ್ರವರಿಯಲ್ಲಿ ಆರಂಭವಾಗಿರುವ ರಷ್ಯಾ-ಉಕ್ರೇನ್ ಯುದ್ಧ ಇನ್ನೂ ನಿಂತಿಲ್ಲ. ಇದೀಗ ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿ ತಿಳಿಸಿದೆ.
ಮಾಸ್ಕೋ (ಜು.30): 2022ರ ಫೆಬ್ರವರಿಯಲ್ಲಿ ಆರಂಭವಾಗಿರುವ ರಷ್ಯಾ-ಉಕ್ರೇನ್ ಯುದ್ಧ ಇನ್ನೂ ನಿಂತಿಲ್ಲ. ಇದೀಗ ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿ ತಿಳಿಸಿದೆ. ರಷ್ಯಾ ರಾಜಧಾನಿ ಮಾಸ್ಕೋದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು, 2 ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಕಟ್ಟಡದ ಮುಂಭಾಗ ಹಾನಿಗೊಳಗಾಗಿದ್ದು Oko-2 ಎಂಬ ಹೆಸರಿನ ಕಟ್ಟಡದಲ್ಲಿನ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಈ ಬಗ್ಗೆ ಮಾಹಿತಿ ನೀಡಿದ ನಂತರ ಮಾಸ್ಕೋದ ವ್ನುಕೋವೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Vnukovo international airport ) ಭಾನುವಾರ ಮುಂಜಾನೆಯಿಂದ ಸಂಪೂರ್ಣ ಬಂದ್ ಮಾಡಲಾಗಿದೆ. ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಇದಾದ ನಂತರ ರಷ್ಯಾದ ರಕ್ಷಣಾ ಸಚಿವಾಲಯವು ಮಾಸ್ಕೋದ ಮೇಲೆ ದಾಳಿ ಮಾಡಿದ ಮೂರು ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ.

ಕಚೇರಿಯ ಟವರ್ ಮುಂಭಾಗಗಳು ಅತ್ಯಲ್ಪವಾಗಿ ಹಾನಿಗೊಳಗಾಗಿವೆ ಎಂದು ನಗರದ ಮೇಯರ್ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಸ್ಕೋ ನಗರವು ಪಶ್ಚಿಮಕ್ಕೆ ವಾಣಿಜ್ಯ ಅಭಿವೃದ್ಧಿ ಇರುವ ಪ್ರಮುಖ ಸ್ಥಳವಾಗಿದೆ.
ಈ ಘಟನೆಯ ಹಿಂದಿನ ದಿನ ರಷ್ಯಾದ ರಕ್ಷಣಾ ಸಚಿವಾಲಯವು ಓಡಿಂಟ್ಸೊವೊ ಜಿಲ್ಲೆಯ ಭೂಪ್ರದೇಶದಲ್ಲಿ ಡ್ರೋನ್ವೊಂದನ್ನು ಹೊಡೆದುರುಳಿಸಿದೆ. ಇನ್ನು ಜುಲೈ ತಿಂಗಳ ಮೊದಲಾರ್ಧದಲ್ಲಿ ಕೀವ್ ಆಡಳಿತವು S-200 ವಾಯು ರಕ್ಷಣಾ ವ್ಯವಸ್ಥೆಯ ವಿಮಾನ ವಿರೋಧಿ ಕ್ಷಿಪಣಿಯೊಂದಿಗೆ ಭಯೋತ್ಪಾದಕ ದಾಳಿ ನಡೆಸಿತ್ತು. ಹಾಗೆಯೇ, ಕೆಲ ದಿನಗಳ ಹಿಂದೆ, ನಗರದ ಮಧ್ಯದಲ್ಲಿ ರಾಕೆಟ್ ಸ್ಫೋಟ ಸಂಭವಿಸಿದೆ ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಗೊಲುಬೆವ್ ಹೇಳಿದ್ದಾರೆ.

ಯುದ್ಧ ನಿಲ್ಲಿಸುವ ಬಗ್ಗೆ ಪುಟಿನ್ ಮಾತು: ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಆಫ್ರಿಕನ್ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿದ ರಷ್ಯಾ ಅಧ್ಯಕ್ಷ ಪುಟಿನ್, ಯುದ್ಧ ನಿಲ್ಲಿಸುವ ಮಾತನಾಡಿದ್ದಾರೆ. ಆಫ್ರಿಕಾ ನಾಯಕರು ಶಾಂತಿ ಸ್ಥಾಪನೆಗೆ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಆಫ್ರಿಕನ್ ನಾಯಕರ ಶಾಂತಿ ಮಾತುಕತೆಗೆ ಮಾಸ್ಕೋ ಬದ್ಧವಾಗಿದೆ. ಶಾಂತಿ ಸ್ಥಾಪನೆಗೆ ಮಾಸ್ಕೋ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆದರೆ ಉಕ್ರೇನ್ ನಡೆಸುತ್ತಿರುವ ದಾಳಿಯಿಂದ ರಷ್ಯಾಗೆ ಯುದ್ಧ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪುಟಿನ್ ಹೇಳಿದ್ದಾರೆ.