Ashraf Kammaje |
Updated on:Jul 28, 2023 | 5:53 PM

ಕಳೆದ ವರ್ಷ ಗ್ಯಾಂಬಿಯಾದಲ್ಲಿ ಸಿರಪ್ ಸೇವಿಸಿ 60 ಕ್ಕೂ ಹೆಚ್ಚು ಮಕ್ಕಳು ಮತ್ತು ಉಜ್ಬೇಕಿಸ್ತಾನ್ನಲ್ಲಿ ಸುಮಾರು 20 ಮಂದಿ ಸಾವಿಗೀಡಾಗಿದ್ದರು. ಈ ಘಟನೆಗಳು ಭಾರತದಿಂದ ಔಷಧ ರಫ್ತಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ
ದೆಹಲಿ ಜುಲೈ 28: ಭಾರತದಲ್ಲಿ ತಯಾರಾದ, ಇರಾಕ್ನಲ್ಲಿ (Iraq )ಮಾರಾಟವಾಗುವ ಕೆಮ್ಮಿನ ಸಿರಪ್ ನಲ್ಲಿ (cough syrup) ವಿಷಕಾರಿ ರಾಸಾಯನಿಕ ಪತ್ತೆಯಾಗಿದೆ ಎಂದು ಬ್ಲೂಮ್ಬರ್ಗ್ ನ್ಯೂಸ್ ವರದಿ ಮಾಡಿದೆ. ಪ್ರಪಂಚದಾದ್ಯಂತದ ಮಕ್ಕಳು ಬಳಸುವ ಸಿರಪ್ ಔಷಧಿಗಳಲ್ಲಿ ವಿಷ ವಸ್ತು ಪತ್ತೆಯಾಗಿರುವ ಪ್ರಕರಣಗಳಲ್ಲಿ ಇದು ಇತ್ತೀಚಿನದ್ದು. ಮಾರ್ಚ್ನಲ್ಲಿ ಬಾಗ್ದಾದ್ನ ಔಷಧಾಲಯದಲ್ಲಿ ಖರೀದಿಸಿದ ಕೋಲ್ಡ್ ಔಟ್ (Cold Out) ಬಾಟಲಿಯು 2.1 ಪ್ರತಿಶತ ಎಥಿಲೀನ್ ಗ್ಲೈಕೋಲ್ ಅನ್ನು ಹೊಂದಿದೆ ಎಂದು ಅಮೆರಿಕ ಖಾಸಗಿ ಪ್ರಯೋಗಾಲಯವಾದ ವ್ಯಾಲಿಸೂರ್ LLC ಹೇಳಿದೆ. ಇದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಮಿತಿಗಿಂತ ಸುಮಾರು 21 ಪಟ್ಟು ಹೆಚ್ಚು. ಈ ಸಂಯುಕ್ತವು ಸಣ್ಣ ಪ್ರಮಾಣದಲ್ಲಿ ಮನುಷ್ಯರಿಗೆ ಮಾರಕವಾಗಿದೆ. ಕಳೆದ ವರ್ಷ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್ನಲ್ಲಿ ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್ಗಳಿಂದ ಮಕ್ಕಳು ಸಾವಿಗೀಡಾಗಿದ್ದರು.

ಬ್ಲೂಮ್ಬರ್ಗ್ ಜುಲೈ 8 ರಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇರಾಕಿ ಮತ್ತು ಭಾರತೀಯ ಅಧಿಕಾರಿಗಳೊಂದಿಗೆ ಪರೀಕ್ಷಾ ಫಲಿತಾಂಶಗಳನ್ನು ಹಂಚಿಕೊಂಡಿದೆ. ವ್ಯಾಲಿಸೂರ್ನ ಪರೀಕ್ಷಾ ಫಲಿತಾಂಶಗಳನ್ನು “ಸ್ವೀಕಾರಾರ್ಹ” ಎಂದು WHO ಬ್ಲೂಮ್ಬರ್ಗ್ಗೆ ಹೇಳಿದೆ. ಇರಾಕಿ ಸರ್ಕಾರವು ಉತ್ಪನ್ನ ಅಲ್ಲಿ ಮಾರಾಟವಾಗುತ್ತಿದೆ ಎಂದು ದೃಢೀಕರಿಸಿದರೆ ಎಚ್ಚರಿಕೆಯನ್ನು ನೀಡುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಯಾವುದೇ ಸಾರ್ವಜನಿಕ ಎಚ್ಚರಿಕೆ ಅಥವಾ ಹಿಂಪಡೆಯುವಿಕೆಯ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

ಇರಾಕ್ನ ಆರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್-ಬಾದರ್ ಸಂದರ್ಶನವೊಂದರಲ್ಲಿ ಔಷಧಿಗಳ ಆಮದು, ಮಾರಾಟ ಮತ್ತು ವಿತರಣೆಗೆ ಸಚಿವಾಲಯವು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ ಎಂದು ಹೇಳಿದ್ದಾರ. ಅದೇ ವೇಳೆ ಕೋಲ್ಡ್ ಔಟ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ಸುದ್ದಿಯನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ .
ಒಂದು ವರ್ಷದಲ್ಲಿ ಇದು ಐದನೇ ಬಾರಿಗೆ ಭಾರತೀಯ ರಫ್ತುದಾರರ ಔಷಧಿಗಳಲ್ಲಿ ಎಥಿಲೀನ್ ಗ್ಲೈಕೋಲ್ ಅಧಿಕ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ. ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ್ ನಲ್ಲಿನ ಪ್ರಕರಣದ ಜತೆಗೇ ಸರ್ಕಾರಿ ಪ್ರಯೋಗಾಲಯಗಳ ಪರೀಕ್ಷೆಯು ಮಾರ್ಷಲ್ ಐಲ್ಯಾಂಡ್ ಮತ್ತು ಲೈಬೀರಿಯಾದಲ್ಲಿ ಇತರ ಕಲುಷಿತ ಉತ್ಪನ್ನಗಳನ್ನು ಗುರುತಿಸಿದೆ. ಆದಾಗ್ಯೂ ಆ ಔಷಧಿಗಳಿಂದಾಗಿ ಯಾವುದೇ ಕಾಯಿಲೆ ವರದಿ ಆಗಿಲ್ಲ.

ಕೋಲ್ಡ್ ಔಟ್ ಲೇಬಲ್ನಲ್ಲಿ ಬರೆದಿರುವಂತೆ ಇದನ್ನು ಬ್ರಿಟನ್, ಜರ್ಮನಿ ಮತ್ತು ಕೆನಡಾ ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳನ್ನು ರಫ್ತು ಮಾಡುವ ಚೆನ್ನೈ ಮೂಲದ ತಯಾರಕರಾದ ಫೋರ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ನಿಂದ ತಯಾರಿಸಲ್ಪಟ್ಟಿದೆ. ಅಲ್ಲಿನ ಉಪಾಧ್ಯಕ್ಷ ಬಾಲ ಸುರೇಂದ್ರನ್, ಫೋರ್ಟ್ಸ್ ಕೋಲ್ಡ್ ಔಟ್ ತಯಾರಿಕೆಯನ್ನು ಮತ್ತೊಂದು ಭಾರತೀಯ ಕಂಪನಿಯಾದ ಪುದುಚೇರಿ ಮೂಲದ ಶರಣ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್ಗೆ ಗುತ್ತಿಗೆ ನೀಡಿರುವುದಾಗಿ ಹೇಳಿದ್ದಾರೆ.
ವ್ಯಾಲಿಸೂರ್ ಲ್ಯಾಬ್, ಕೋಲ್ಡ್ ಔಟ್ ಮಾದರಿಯನ್ನು ಐದು ಬಾರಿ ಪರೀಕ್ಷಿಸಿದೆ. ಇದರಲ್ಲಿ ಸರಾಸರಿ ಎಥಿಲೀನ್ ಗ್ಲೈಕೋಲ್ ಅಂಶವು 2.1 ಪ್ರತಿಶತ ಮತ್ತು ಡೈಥಿಲೀನ್ ಗ್ಲೈಕೋಲ್ ಅಂಶವು ಶೇಕಡಾ 0.25 ರಷ್ಟಿದೆ. ಡೈಥಿಲೀನ್ ಗ್ಲೈಕೋಲ್ ಅಂಶವು ಮಿತಿಗಿಂತ ಎರಡು ಪಟ್ಟು ಹೆಚ್ಚು. ಮಾಲಿನ್ಯಕಾರಕಗಳಿರುವ ಇತರ ಯಾವುದೇ ಸಿರಪ್ಗಳು 0.1 ಶೇಕಡಾ ಮಟ್ಟವನ್ನು ಮೀರಲಿಲ್ ಎಂದು ಅದು ಹೇಳಿದೆ.