
ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು SITತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಶುಕ್ರವಾರ (ಜು.28) ಬೆಳಿಗ್ಗೆ11ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಕರೆ ಕೊಟ್ಟಿದೆ.

ಈ ಕುರಿತು ಸಮಿತಿಯು ಪ್ರಕಟಣೆ ಹೊರಡಿಸಿದ್ದು, ”2012ರ ಆಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಂಗಳದ ವಿದ್ಯಾರ್ಥಿನಿ ಸೌಜನ್ಯ ಎಂಬ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಂತ ಘೋರವಾದ ಅತ್ಯಾಚಾರವನ್ನು ನಡೆಸಿ, ಆಕೆಯನ್ನು ಕೊಲೆ ಮಾಡಲಾಗಿತ್ತು, ಅದನ್ನು ಮುಚ್ಚಿ ಹಾಕಲು ಯತ್ನಿಸಿದ ಶಕ್ತಿಗಳ ವಿರುದ್ಧ ಬೆಳ್ತಂಗಡಿ, ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ನಡೆಸಿದ ನಿರಂತರ ಹೋರಾಟ ಹಾಗೂ ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳು ಹತ್ತು ದಿನ ನಡೆಸಿದ ಅನಿರ್ದಿಷ್ಟಾವಧಿ ಹೋರಾಟಗಳ ಫಲವಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು” ಎಂದು ತಿಳಿಸಿದೆ.

”ಈ ಪ್ರಕರಣದ ಕುರಿತು 11 ವರ್ಷಗಳ ಕಾಲ ದೀರ್ಘ ತನಿಖೆ ನಡೆಸಿದ ಸಿ.ಬಿ.ಐನ ವಿಶೇಷ ನ್ಯಾಯಾಲಯವು ತನಿಖಾಧಿಕಾರಿಗಳು ಆರೋಪಿ ಎಂದು ಗುರುತಿಸಲಾಗಿದ್ದ ಸಂತೋಷ್ ರಾವ್‌ರನ್ನು ದೋಷಮುಕ್ತಗೊಳಿಸಿ, ಈ ತನಿಖೆಯು ಲೋಪ-ದೋಷಗಳಿಂದ ಕೂಡಿದ್ದು, ಆ ಕಾರಣದಿಂದ ಈ ಪ್ರಕರಣವು ಮುಂದುವರಿದೆ ತನಿಖೆಗೆ ಅರ್ಹ ಪ್ರಕರಣವಾಗಿದೆ ಎಂದೂ ಹೇಳಿದ ಸಿಬಿಐ ತನಿಖೆಯ ಲೋಪಗಳನ್ನು ಪಟ್ಟಿ ಮಾಡಿರುವ ವಿಶೇಷ ನ್ಯಾಯಾಲಯವು ‘ಸಿಬಿಐನ ತನಿಖೆಯು ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲ’ ಎಂದು ಬೊಟ್ಟು ಮಾಡಿದೆ, ಮತ್ತು ನಿರ್ದೋ ಸಂತೋಷ್ ರಾವ್ ಅವರಿಗೆ ಕಾನೂನು ಪರಿಹಾರ ನೀಡಬೇಕೆಂದು ಆದೇಶಿಸಿದೆ” ಎಂದು ಹೇಳಿದೆ.

ಸೌಜನ್ಯಳ ಮೇಲೆ ನಡೆದದ್ದು “ಅತ್ಯಂತ ಕ್ರೂರ ಅತ್ಯಾಚಾರ ಮತ್ತು ಕೊಲೆ” ಎಂದು ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು ಇದನ್ನು ಆದ್ಯತೆಯಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆರಂಭದಲ್ಲಿಯೇ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಿತ್ತು. ಆದರೆ, ಈ ವಿಶೇಷ ನ್ಯಾಯಾಲಯದ ನಿರ್ದೇಶನವನ್ನು ನಿರ್ಲಕ್ಷಿಸಿದ ಸಿ.ಬಿ.ಐ. ರಾಜಕೀಯ ಪ್ರಭಾವದಿಂದ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರನ್ನು ರಕ್ಷಿಸಿ ನಿರಪರಾಧಿಯೊಬ್ಬರನ್ನು ಬಲಿ ಹಾಕಿದ್ದು ಸ್ಪಷ್ಟವಾಗಿದೆ.