
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಚಿಂತನೆ ನಡೆಸಿವೆ.
ಸಂಸತ್ ಅಧಿವೇಶನದ (Parliament Monsoon Session) ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಮಂಗಳವಾರ (ಇಂದು) ನಡೆಸಿದ ಸಭೆಯಲ್ಲಿ 26 ವಿಪಕ್ಷಗಳ ಒಕ್ಕೂಟದಿಂದ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮಣಿಪುರದ ಪರಿಸ್ಥಿತಿಯ (Manipur Violence) ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಆದ್ರೆ ಈವರೆಗೂ ಪ್ರಧಾನಿ ಮೋದಿ ಮಾತನಾಡುವ ಗೋಜಿಗೆ ಹೋಗಿಲ್ಲ. ಇತ್ತ ಮಣಿಪುರದ ಬಗ್ಗೆ ಸದನದಲ್ಲಿ ಚರ್ಚೆಗೂ ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ನಿರ್ಧಾರಕ್ಕೆ ವಿಪಕ್ಷಗಳು ಬಂದಿವೆ.

ಅವಿಶ್ವಾಸ ನಿರ್ಣಯ ಮಂಡನೆಯಾದರೆ ಆ ಬಗ್ಗೆ ಚರ್ಚೆಯಾಗಬೇಕಾಗುತ್ತದೆ. ಇದು ಸರ್ಕಾರಕ್ಕೆ ಮುಜುಗರ ಸೃಷ್ಠಿಸಬಹುದು, ಹೀಗಾಗಿ ಮಣಿಪುರದ ಚರ್ಚೆಗೆ ಸರ್ಕಾರ ಒಪ್ಪಿಕೊಳ್ಳಬಹುದು ಎನ್ನುವ ಲೆಕ್ಕಚಾರ ಹಾಕಿರುವ ವಿಪಕ್ಷಗಳು ಇಂದಿನ ಸಭೆಯಲ್ಲೇ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಮಾತುಕತೆ ನಡೆಸಿವೆ.

ಸಂಸತ್ತಿನ ಮುಂಗಾರು ಅಧಿವೇಶನ ಮಂಗಳವಾರವಾದ ಇಂದು 4ನೇ ದಿನಕ್ಕೆ ಕಾಲಿಟ್ಟಿದ್ದು, ಮಣಿಪುರದಲ್ಲಿ ಜನಾಂಗೀಯ ಸಂಘರ್ಷ, ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಅಧಿವೇಶನವು ಹಲವು ಬಾರಿ ಮುಂದೂಡಿಕೆ ಕಂಡಿದೆ.