
ಘಟನೆಯನ್ನು ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯಾಗಿ ಹಲವು ನಾಯಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಚಲನಚಿತ್ರ ನಟರು, ಕ್ರೀಡಾಪಟುಗಳು ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದಾರೆ. ದೋಷಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಖಾತರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ‘ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ. ಮಣಿಪುರದ ಹೆಣ್ಣುಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ಕ್ಷಮೆಯಿಲ್ಲ. ಕಾನೂನು ತನ್ನೆಲ್ಲಾ ಕಾಠಿಣ್ಯದೊಂದಿಗೆ ಕೆಲಸ ಮಾಡಲಿದೆ. ಘಟನೆಯಿಂದ 140 ಕೋಟಿ ಜನರು ಅವಮಾನ ಪಡುವಂತಾಗಿದೆ’ ಎಂದಿದ್ದಾರೆ.

ಮತ್ತೊಂದೆಡೆ ಮಹಿಳೆಯರ ನಗ್ನ ಪರೇಡ್ ಖಂಡಿಸಿ ಗುರುವಾರ ಮಣಿಪುರ ರಾಜಧಾನಿ ಇಂಫಾಲ ಸೇರಿದಂತೆ ಹಲವೆಡೆ ಕುಕಿ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದು, ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಮೇ 4ರಂದು ನಡೆದ ಘಟನೆಯ ವಿಡಿಯೋ ಬುಧವಾರ ಬಿಡುಗಡೆಯಾಗಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಣಿಪುರ ಪೊಲೀಸರು, ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಪಕ್ಷಗಳ ಆಕ್ರೋಶ:
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಮಾಜದ ಸೂಕ್ಷ್ಮತೆಗಳನ್ನು ನಾಶ ಮಾಡುವ ಮೂಲಕ ತಮ್ಮ ಒಟ್ಟಾಡಳಿತದಿಂದ ಪ್ರಜಾಪ್ರಭುತ್ವವನ್ನು ಬದಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದರೆ, ಮೋದಿ ಅವರ ಮೌನ ಹಾಗೂ ನಿಷ್ಕ್ರಿಯತೆ ಮಣಿಪುರದಲ್ಲಿ ಅರಾಜಕತೆ ಸೃಷ್ಟಿಸಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಇನ್ನು ಮಣಿಪುರ ಹಿಂಸಾಚಾರ ಗುರುವಾರ ಸಂಸತ್ತಿನ ಉಭಯ ಸದನಗಳ ಕಲಾಪವನ್ನೂ ಬಲಿ ಪಡೆದಿದ್ದು, ಮುಂದಿನ ದಿನಗಳನ್ನೂ ಆಹುತಿ ಪಡೆಯುವ ಸುಳಿವು ನೀಡಿದೆ. ಘಟನೆ ಕುರಿತು ಸ್ವತಃ ಪ್ರಧಾನಿ ಸದನದಲ್ಲಿ ಉತ್ತರ ನೀಡಬೇಕು, ಮಣಿಪುರ ಸಿಎಂ ಬೀರೇನ್‌ರನ್ನು ವಜಾ ಮಾಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಪೊಲೀಸರಿಗೆ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್ ಗರಂ:
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ನಾಲ್ವರ ಬಂಧನ:
ಈ ನಡುವೆ ವೈರಲ್ ಆದ ವಿಡಿಯೋದಲ್ಲಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆ ಬಳಸಿಕೊಂಡು ವಿಡಿಯೋದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಈ ಪೈಕಿ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾದ ಹುಯಿರಿಮ್ ಹೆರಾದಶ್ (32) ಕೂಡಾ ಸೇರಿದ್ದಾನೆ. ಬಂಧಿತರ ವಿಚಾರಣೆ ಮುಂದುವರೆದಿದ್ದು, ಅವರು ನಿಡುವ ಸುಳಿವು ಆಧರಿಸಿ ಇನ್ನಷ್ಟು ಜನರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.