
ಮಣಿಪುರ: ಸಂಘರ್ಷ ಪೀಡಿತ ಮಣಿಪುರದಲ್ಲಿ (Manipur) ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಒಂದು ದಿನದಲ್ಲಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದರು. ಆರೋಪಿಯನ್ನು ಆ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಆತನನ್ನು ಹುಯಿರೆಮ್ ಹೆರಾದಾಸ್ ಸಿಂಗ್ (32) ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ಈತ ಹಸಿರು ಟೀ ಶರ್ಟ್ ಧರಿಸಿದ್ದ. ಈತ ಮಹಿಳೆಯೊಬ್ಬರನ್ನು ಎಳೆದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಬರೋಬ್ಬರಿ 77 ದಿನಗಳಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರೋ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಈವರೆಗೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಖುದ್ದು ಸೇನೆ ಫೀಲ್ಡ್‌ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಶಾಂತಿ ಎಂಬುದಿಲ್ಲಿ ಮರೀಚಿಕೆ ಆಗಿದೆ. ಇಂತಹ ಸಂದರ್ಭದಲ್ಲಿ ಮನುಕುಲ ತಲೆತಗ್ಗಿಸುವಂತಹ ವೀಡಿಯೋ ಒಂದು ಹೊರಬಂದಿತ್ತು. ಆದಿವಾಸಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲೆ ಮಾಡಿದ ರಾಕ್ಷಸಿ ಗುಂಪೊಂದು, ಅವರನ್ನು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮಾಡಿತ್ತು. ಈ ದೃಶ್ಯಾವಳಿ ಇದು ಇಡೀ ದೇಶದ ಮನಕಲಕಿದ್ದು, ಆಕ್ರೋಶಕ್ಕೆ ಕಾರಣವಾಗಿದೆ

ಶಾಂತಿಭದ್ರತೆಯ ಕಾರಣದಿಂದ ಈ ವೀಡಿಯೋವನ್ನು ಯಾರೂ ಶೇರ್ ಮಾಡದಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಎಲ್ಲಾ ವೀಡಿಯೋಗಳನ್ನು ತೆಗೆದು, ನೆಲದ ಕಾನೂನು ಪಾಲಿಸುವಂತೆ ಟ್ವಿಟ್ಟರ್ ಸಂಸ್ಥೆಗೆ ಹುಕುಂ ಮಾಡಿದೆ.