
ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಜುಲೈ 17 ರಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಒಡನಾಡಿ ಸಂಸ್ಥೆ ತೀರ್ಮಾನಿಸಿದೆ.
2012ರ ಅಕ್ಟೋಬರ್ 9ರಂದು ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೋರಾಟ ಮತ್ತೆ ಭುಗಿಲೆದ್ದಿದೆ. ಸೌಜನ್ಯಗೆ ನ್ಯಾಯ ಸಿಗಬೇಕು. ದುರುಳ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯ ಜೋರಾದ ಕೂಡಲೇ ಸಿಎಂ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಲು ಅವರಿಗೆ ವೀರೇಂದ್ರ ಹೆಗಡೆ ಪತ್ರ ಬರೆದಿದ್ದಾರೆ ಎಂದು ಹೋರಾಟಗಾರ ಮಹೇಶ್ ತಿಮರೋಡಿ ಆರೋಪಿಸಿದ್ದಾರೆ.

ಜಲದರ್ಶಿನಿ ಅತಿಥಿಗೃಹದಲ್ಲಿ ಒಡನಾಡಿ ಸೇವಾ ಸಂಸ್ಥೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಡೆ ಅವರು ಶಕ್ತಿಯೋಜನೆಯನ್ನು ಹೊಗಳುವ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ತಲೆಹಾಕದಂತೆ ಕಟ್ಟಿಹಾಕುವ ಉದ್ದೇಶದಿಂದ ಅವರಿಗೆ ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಇವರ ಮಾತಿಗೆ ಮರುಳಾಗದೇ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಆದೇಶ ಮಾಡುವ ಮೂಲಕ ಧರ್ಮಸ್ಥಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಧರ್ಮಸ್ಥದಲ್ಲಿ ಸೌಜನ್ಯ ಪ್ರಕರಣದಂತಹ ನೂರಾರು ಕೊಲೆ, ಅತ್ಯಾಚಾರಗಳು ನಡೆದು ಬೆಳಕಿಗೆ ಬಾರದೆ ಕತ್ತಲಲ್ಲೇ ಕರಗಿ ಹೋಗಿವೆ. ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ರಾಜ್ಯದ ಜನರು ತಲೆ ತಗ್ಗಿಸುವಂತ ವಿಚಾರ. ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದಂತೆ, ಪದ್ಮ, ನೇತ್ರಾವತಿಯಂತಹ ನೂರಾರು ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ಈ ನಕಲಿ ಹಿಂದುತ್ವಾದಿಗಳಾದ ಬಜರಂಗದಳ, ವಿಶ್ವಹಿಂದೂ ಪರಿಷತ್, ಆರೆಸ್‍ಎಸ್ ಸಂಘಟನೆಗಳು ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲೇ ಇಲ್ಲ. ಇವರೆಲ್ಲ ಬಾಡಿಗೆ ಹೋರಾಟಗಾರರು ಎಂದು ಮಹೇಶ್ ಶೆಟ್ಟಿ ಆರೋಪಿಸಿದ್ದಾರೆ.

ಒತ್ತಾಯಿಸಿ ಜುಲೈ 17 ರಂದು ಮೈಸೂರಿನಲ್ಲಿ ಪ್ರತಿಭಟನೆ
ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಜುಲೈ 17 ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಿಂದ ಗಾಂಧಿವೃತ್ತದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ತಿಳಿಸಿದ್ದಾರೆ.
“ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವಂತೆ ಜನರಲ್ಲಿ ಹೇಗೆ ಜಾಗೃತ ಮೂಡಿಸಬೇಕು ಎಂಬ ವಿಚಾರವಾಗಿ ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅದರ ಭಾಗವಾಗಿ ಈ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದರು.

ಹಲವಾರು ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನೆಡಸಲಾಗುತ್ತಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಅತ್ಯಾಚಾರಗಳು ಮತ್ತೆ ಮರುಕಳಿಸದಂತೆ ತಡೆಯಲು ಈ ಹೋರಾಟ ಅತ್ಯವಶ್ಯಕ ಎಂದು ಅವರು ಹೇಳಿದ್ದಾರೆ.

ಎಂ.ಎಲ್ ಪರಶುರಾಂ ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಅಪರಾಧಿ ಎಂದು ಸುಳ್ಳು ಪ್ರಕರಣ ದಾಖಲಿಸಿ ಆರುವರೆ ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಆದರೆ ಸಿಬಿಐ ಕೋರ್ಟ್ ಆತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಅಧಿಕಾರಿಗಳು ಕೊಟ್ಟಿರುವ ಸಾಕ್ಷಿಗಳು ಹಾಗೂ ವೈದ್ಯರು ನೀಡಿರುವ ಡಿಎನ್‍ಎ ವರದಿಗಳು ಹೊಲಿಕೆಯಾಗುತ್ತಿಲ್ಲ ಎಂದು ಹೇಳಿದ್ದು, ನೈಜ ಆರೋಪಿಗಳ ತನಿಖೆ ಮಾಡುವಂತೆ ಆದೇಶವನ್ನೂ ನೀಡಿದೆ. ಅದರಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಸೌಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.