M. Ashraf | Edited By: Kammaje
Updated on:Jul 14, 2023 | 6:45 PM

ಜಮೀನಿಗೆ ಹೋಗಿದ್ದ ವೇಳೆ ದಾಳಿ ಮಾಡಿದ ಚಿರತೆಯನ್ನು ಸೆರೆಹಿಡಿದು ಬಳಿಕ ಬೈಕ್ಗೆ ಕಟ್ಟಕೊಂಡು ಹೋಗಿ ಅರಣ್ಯ ಇಲಾಖೆಗೆ ಯುವಕ ಒಪ್ಪಿಸಿರುವಂತಹ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ನಡೆದಿದೆ.
ಹಾಸನ: ಚಿರತೆ ಅಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಅದರ ಹೆಸರು ಕೇಳಿದರೆ ಮಾರು ದೂರ ಓಡಿ ಹೋಗುತ್ತವೆ. ಇನ್ನು ಚಿರತೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಬೋನ್ಯಿಟ್ಟು ದಿನವಿಡಿ ಕಾದರೂ ಸೆರೆಹಿಡಿಯಲು ಆಗಲು. ಆದರೆ ಇಲ್ಲೊಬ್ಬ ಸಾಹಸಿ ಯುವಕ ಜೀವಂತ ಚಿರತೆಯನ್ನು ಸೆರೆಹಿಡಿದು ಬೈಕ್ನಲ್ಲಿ ಸಾಗಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ನಡೆದಿದೆ.

ವೇಣುಗೋಪಾಲ್ ಅಲಿಯಾಸ್ ಮುತ್ತು ಚಿರತೆ ಹಿಡಿದ ಯುವಕ. ಬೆಳಗ್ಗೆ ತಮ್ಮ ಜಮೀನಿಗೆ ಹೋಗಿದ್ದ ವೇಳೆ ದಾಳಿ ಮಾಡಿದ ಚಿರತೆಯನ್ನು ಸೆರೆಹಿಡಿದಿದ್ದು, ಬಳಿಕ ಬೈಕ್ಗೆ ಕಟ್ಟಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಸದ್ಯ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿರತೆಗೆ ಚಿಕಿತ್ಸೆ ನೀಡಲಾಗಿದೆ. ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ.
ಹಸುಗಳಿದ್ದ ಕೊಟ್ಟಿಗೆಗೆ ನುಗ್ಗಿದ ಚಿರತೆ: ಸೆರೆಹಿಡಿಯಲು ಹರಸಾಹಸ
ಅದೇ ರೀತಿಯಾಗಿ ಹಾಸನ ತಾಲೂಕಿನ ಹೊಸಳ್ಳಿ ಗ್ರಾಮದ ಮಹೇಶ್ ಎಂಬುವರ ಮನೆಗೆ ಚಿರತೆ ನುಗ್ಗಿದೆ. ತಮ್ಮ ಜಮೀನಿನಲ್ಲಿ ನಿರ್ಮಿಸಿರುವ ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಚಿರತೆ ಸಿಲುಕಿಕೊಂಡಿದೆ. ಜಾನುವಾರು ಇದ್ದ ಕಾರಣ ಆಹಾರ ಅರಸಿ ನುಗ್ಗಿದೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಚಿರತೆ ನುಗ್ಗಿರುವ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುಗಳ ರಕ್ಷಣೆ ಮಾಡಲಾಗಿದೆ. ಮಧ್ಯಾಹ್ನ 1.30ರಿಂದ ಕೊಟ್ಟಿಗೆ ಒಳಗೆ ಚಿರತೆ ಮಲಗಿದ್ದು, ಹಸುಗಳಿದ್ದರೂ ತೊಂದರೆ ಕೊಟ್ಟಿಲ್ಲ. ಚಿರತೆ ನುಗ್ಗಿರುವ ಮನೆಯ ಸುತ್ತ ನೂರಾರು ಜನ ಜಮಾಯಿಸಿದ್ದು, ಜನರನ್ನು ನಿಯಂತ್ರಿಸಲು ದುದ್ದಾ ಠಾಣೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಬೋನ್ ಅಳವಡಿಸಿದ್ದಾರೆ. ಅರವಳಿಕೆ ಇಂಜೆಕ್ಷನ್ ನೀಡಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದಾರೆ. ಮಧ್ಯಾಹ್ನದಿಂದ ಚಿರತೆ ಸೆರೆ ಹಿಡಿಯದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.