
ಶ್ರೀಹರಿಕೋಟಾ(ಜು.14) ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರಂತರ ಪ್ರಯತ್ನದ ಫಲದಿಂದ ಚಂದ್ರಯಾನ-3 ವ್ಯೋಮನೌಕೆಯನ್ನು ಹೊತ್ತ ಎಲ್‌ವಿಎಂ-3 ರಾಕೆಟ್ ನಭಕ್ಕೆ ಚಿಮ್ಮಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಮಧ್ಯಾಹ್ನ 2.35ಕ್ಕೆ ಸರಿಯಾಗಿ ನೌಕೆ ಪಯಣ ಆರಂಭಿಸಿತು.

ಶ್ರೀಹರಿಕೋಟಾದ ವೀಕ್ಷಕ ಗ್ಯಾಲರಿಯಲ್ಲಿ 10,000 ಕ್ಕೂ ಹೆಚ್ಚು ಮಂದಿ ಚಂದ್ರಯಾನ ಉಡಾವಣೆ ವೀಕ್ಷಿಸಿದ್ದಾರೆ. ಇದರಲ್ಲಿ ಶೇಕಡಾ 40 ರಷ್ಟು ಶಾಲಾ ವಿದ್ಯಾರ್ಥಿಗಳಾಗಿದ್ದಾರೆ. ಗ್ಯಾಲರಿಯಲ್ಲಿ ಕುಳಿತ್ದ ವೀಕ್ಷಕರು ನಿಮಿಷ ನಿಮಿಷಕ್ಕೂ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ.

ಚಂದ್ರನ ಮೇಲೆ ಸುರಕ್ಷಿತವಾಗಿ ಚಂದ್ರಯಾನ-3ದ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವುದಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ ಹಾಗೂ ನಂತರ ಚಂದ್ರನ ಮೇಲೆ ಪ್ರಗ್ಯಾನ್ ಹೆಸರಿನ ರೋವರ್ ಸುತ್ತಲಿದೆ ಹಾಗೂ ಇತ್ತೀಚಿನ ಪರಿಸ್ಥಿತಿ ಹಾಗೂ ತರಹೇವಾರಿ ಕುತೂಹಲಕರ ಮಾಹಿತಿಯನ್ನು ವಿಜ್ಞಾನಿಗಳಿಗೆ ನೀಡಲಿದೆ.
ಈಗ ಅಂದುಕೊಂಡಿರುವ ಪ್ರಕಾರ ಆ.23 ಅಥವಾ 24ರಂದು ಚಂದ್ರನ ಮೇಲೆ ವ್ಯೋಮನೌಕೆ ಲ್ಯಾಂಡ್ ಆಗಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ನೌಕೆ ಲ್ಯಾಂಡ್ ಆಗುವಲ್ಲಿ ವೈಪರೀತ್ಯಗಳ ಕಾರಣ ವ್ಯತ್ಯಾಸವಾದರೂ ಆದರೆ, ಪರ್ಯಾಯ ಮಾರ್ಗಗಳನ್ನು ಇಸ್ರೋ ಕಂಡುಕೊಂಡಿದ್ದು, ಒಂದಿಲ್ಲೊಂದು ಪರ್ಯಾಯ ಸ್ಥಳಗಳಲ್ಲಿ ನೌಕೆಯ ಭೂಸ್ಪರ್ಶಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಸಾಕಷ್ಟುಇಂಧನ ವ್ಯವಸ್ಥೆಯನ್ನೂ ಲ್ಯಾಂಡರ್‌ಗೆ ಮಾಡಲಾಗಿದೆ. ಅದಕ್ಕೆಂದೇ ಮುಂಜಾಗ್ರತಾ ಕ್ರಮವಾಗಿ ‘ವೈಫಲ್ಯ ಆಧರಿತ ವಿನ್ಯಾಸ’ ಮಾಡಲಾಗಿದೆ.

ಈವರೆಗೆ ಯಾವುದೇ ಉಪಕರಣಗಳು ಹೋಗದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ತನ್ನ ನೌಕೆಯನ್ನು ಇಳಿಸುವ ಸಾಹಸಕ್ಕೆ ಮುಂದಾಗಿದೆ. ಚಂದ್ರನ ಅಧ್ಯಯನಕ್ಕೆ 2019ರ ಜು.22ರಂದು ಇಸ್ರೋ ಕೈಗೊಂಡಿದ್ದ ಚಂದ್ರಯಾನ-2 ಯೋಜನೆ ವಿಫಲವಾದ ಕಾರಣ ಮತ್ತೊಂದು ಚಂದ್ರಯಾನ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಉಷ್ಣಾಂಶ -230 ಡಿ.ಸೆ.ಗಿಂತ ಕಡಿಮೆ ಇದ್ದು, ಇಲ್ಲಿ ಬಹುಕಾಲ ದವರಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆಗಳು ಇರುವ ಅಂದಾಜಿದೆ. ಅಲ್ಲದೆ, 2008ರಲ್ಲಿ ಕೈಗೊಂಡ ಚಂದ್ರಯಾನ-1 ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎಂಬುದು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಳ್ಳ ಲಾಗಿದೆ. ಅಲ್ಲದೆ, ದಕ್ಷಿಣ ಧ್ರುವದಲ್ಲಿ ಈವರೆಗೂ ಬೆಳಕನ್ನೇ ಕಾಣದ ಹಲವು ಪ್ರದೇಶಗಳಿರುವ ಕಾರಣ ಇದು ವಿಜ್ಞಾನಿಗಳಲ್ಲಿ ಸಾಕಷ್ಟುಕುತೂಹಲ ಮೂಡಿಸಿದೆ.

ಜು.14ರಂದು ಭೂಮಿಯಿಂದ ಹಾರುವ ನೌಕೆ ಆ.23 ಅಥವಾ 24ರಂದು ಚಂದ್ರನ ಮೇಲ್ಮೈನಲ್ಲಿ ಲ್ಯಾಂಡ್ ಆಗಲಿದೆ. ಶ್ರೀಹರಿಕೋಟಾದಿಂದ ಹೊರ ರಾಕೆಟ್ ಭೂಮಿಯ ಕಕ್ಷೆಗೆ ನೌಕೆಯನ್ನು ಸೇರಿಸಲಿದೆ. ಬಳಿಕ ನೌಕೆ, ಪ್ರತಿ ಸುತ್ತಿಗೂ ದೂರ ಹೆಚ್ಚಿಸಿಕೊಳ್ಳುತ್ತಾ ಚಂದ್ರನ ಕಕ್ಷೆಯನ್ನು ತಲುಪಲಿದೆ. ಅಲ್ಲೂ ಸಹ ಧೀರ್ಘವೃತ್ತಾಕಾ ರದಲ್ಲಿ ಸುತ್ತುತ್ತಾ, ಕಕ್ಷೆಯ ವ್ಯಾಸವನ್ನು ಕಡಿಮೆ ಮಾಡುತ್ತಾ ಚಂದ್ರನಿಗೆ 100 ಕಿ.ಮೀ. ಸಮೀಪಕ್ಕೆ ಬಂದಾಗ ಲ್ಯಾಂಡರ್ ಅನ್ನು ಕಕ್ಷೆಗೆ ಬಿಡಲಿದೆ. ಬಳಿಕ ಲ್ಯಾಂಡರ್‌ನಲ್ಲಿರುವ ಇಂಧನ ಸಹಾಯದಿಂದ ಅದು ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿಯಲಿದೆ. ಲ್ಯಾಂಡರ್ ಸುರಕ್ಷಿತವಾಗಿ ಇಳಿದ ಬಳಿಕ, ಅದರಿಂದ ರಾರಯಂಪ್ ತೆರೆದುಕೊಳ್ಳಲಿದ್ದು, ರೋವರ್ ನಿಧಾನವಾಗಿ ಚಂದ್ರನ ಅಂಗಳಕ್ಕಿಳಿಯಲಿದೆ.
ಚಂದ್ರಯಾನದ ನೌಕೆ ಸಾಫ್ಟ್ ಲ್ಯಾಂಡಿಂಗ್ ಆದರೆ ಈ ಯಶಸ್ಸು ಕಂಡ ವಿಶ್ವದ 4ನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ಈ ಮುಂಚೆ ಅಮೆರಿಕ, ಚೀನಾ ಹಾಗೂ ಸೋವಿಯತ್ ರಷ್ಯಾಗಳು ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಯಶ ಕಂಡಿದ್ದವು.