
ನಮ್ಮ ಸರ್ಕಾರದ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಖುಷಿಯಿಂದ ಸ್ವಾಗತಿಸಿದ್ದು, ಒಂದು ತಿಂಗಳಲ್ಲಿ 18 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಕೆಲವು ಕಡೆ ಬಸ್‌ಗಳ ಕೊರತೆ ಇದೆ ಎಂಬ ಮಾಹಿತಿ ಬಂದಿದೆ. ಇದಕ್ಕಾಗಿ ಸಾರಿಗೆ ಇಲಾಖೆಯಲ್ಲಿ 13 ಸಾವಿರ ಹುದ್ದೆ ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸಿದ ಅವರು, “ಕುಮಾರಸ್ವಾಮಿ ಅವರು ಶಕ್ತಿ ಯೋಜನೆಯಿಂದಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಯಾರಿಗೂ ಸಮಸ್ಯೆಯಾಗಬಾರದು. ಪುರುಷ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹೊಸದಾಗಿ ನಾಲ್ಕು ಸಾವಿರ ಬಸ್‌ಗಳ ಖರೀದಿ ಮಾಡಲು ನಿರ್ಧರಿಸಲಾಗಿದೆ” ಎಂದು ಸದನಕ್ಕೆ ಮಾಹಿತಿ ನೀಡಿದರು.

ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಾಗಿ ಪ್ರಯಾಣ ಮಾಡುತ್ತಿರುವುದರಿಂದ ಎಲ್ಲಾ ಬಸ್‌ಗಳು ರಶ್ ಆಗುತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತವೆ ಎಂಬ ದೂರುಗಳು ಕೇಳಿಬಂದಿದ್ದವು. ಇದಕ್ಕೆ ಪರಿಹಾರ ಹುಡುಕಲು ಮುಂದಾಗಿರುವ ಸರ್ಕಾರ ಹೊಸದಾಗಿ 4,000 ಬಸ್‌ಗಳ ಖರೀದಿ ಮತ್ತು ಕಾರ್ಯಾಚರಣೆಗಾಗಿ 13,000 ಸಾರಿಗೆ ಸಿಬ್ಬಂದಿಗಳ ನೇಮಕಾತಿಗೆ ಮುಂದಾಗಿದೆ.

ಸರ್ಕಾರದ ಈ ಯೋಜನೆಯಿಂದಾಗಿ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗಳು ಲಾಭದ ಹಳಿಗೆ ಮರಳಿವೆ ಎಂದು ವರದಿಯಾಗಿದೆ