
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಆಡಳಿತ ಪಕ್ಷ, ವಿಪಕ್ಷಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತ ಕಾಲೆಳೆದುಕೊಳ್ಳುತ್ತಿವೆ. ದಲಿತ ಯುವಕನನ್ನ ಬ್ರಿಗೇಡ್ ಹೆಸರಲ್ಲಿ ದಾರಿ ತಪ್ಪಿಸಿ ಬಿಜೆಪಿ ಕಾರ್ಯಕರ್ತರಿಂದಲೇ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ(BJP Karnataka) ವಿರುದ್ಧ ಆಡಳಿತಾರೂಢ ಕಾಂಗ್ರೆಸ್(Congress) ಗಂಭೀರ ಆರೋಪ ಮಾಡಿದೆ. ಮತ್ತೊಂದೆಡೆ ಕಾಂಗ್ರೆಸ್ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಇದರ ನಡುವೆ ಕಾಂಗ್ರೆಸ್ ಕೊಲೆಗಡುಕ ಸರ್ಕಾರ ಎಂದು JDS ಸಿಡಿದೆದ್ದಿದೆ.

ಕಾಂಗ್ರೆಸ್ ವಿರುದ್ದ ಹೋರಾಟ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಗೂಂಡಾಗಿರಿ ತಾಂಡವಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಇಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದೆ.

ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಸಂಚಾಲಕನ ಹತ್ಯೆ ವಿಚಾರಕ್ಕೆ ಸಂಬಂಧಿಸಿ ದಲಿತ ಯುವಕನನ್ನ ಬ್ರಿಗೇಡ್ ಹೆಸರಲ್ಲಿ ದಾರಿ ತಪ್ಪಿಸಿ ಬಿಜೆಪಿ ಕಾರ್ಯಕರ್ತರಿಂದಲೇ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಅದ್ಯಾವುದೋ ಬ್ರಿಗೇಡ್ ಹೆಸರಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಕೊಂದು ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು. ದಲಿತರೆಂದರೆ ಬಿಜೆಪಿ ನಾಯಕರಿಗೆ ಯಾಕಿಷ್ಟು ಅಸಹನೆ? ದಲಿತರಿಗೆ, ಹಿಂದುಳಿದ ವರ್ಗದ ಯುವಕರಿಗೆ ಬಿಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೊಂದು ದಿನ ಬಿಳಿ ವಸ್ತ್ರ ಹೊದಿಸಲು. ಬಿಜೆಪಿಯ ಹತ್ಯಾ ರಾಜಕೀಯಕ್ಕೆ ದಲಿತ ಹಿಂದುಳಿದ ವರ್ಗದವರನ್ನೇ ಬಲಿ ಪಡೆಯುತ್ತಿರುವುದೇಕೆ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಆರೋಪ ಮಾಡಿದೆ.
ಇನ್ನು ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕೋರ್ಟ್‌ನಲ್ಲಿ ವಜಾ ಆಗಿದೆ. ಹೀಗಾಗಿ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಅಂತ ಕಾಂಗ್ರೆಸ್ ನಾಯಕರು ಇವತ್ತು ಮೌನ ಪ್ರತಿಭಟನೆ ನಡೆಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕೈ ನಾಯಕರು ಪ್ರತಿಭಟಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ.
