
ನವದೆಹಲಿ: ಭಾರತವು (India) ತನ್ನ ವೈವಿಧ್ಯತೆಯೊಂದಿಗೆ ಸಹಬಾಳ್ವೆಗೆ ಉತ್ತಮ ಮಾದರಿಯಾಗಿದೆ. ಜಗತ್ತಿಗೆ ಭಾರತ ಶಾಂತಿಯ ಸಂದೇಶವನ್ನು ಸಾರಬಲ್ಲದು ಎಂದು ವಿಶ್ವ ಮುಸ್ಲಿಂ ಲೀಗ್ನ (World Muslim League) ಮುಖ್ಯಸ್ಥ ಅಲ್ ಇಸ್ಸಾ (al-Issa) ಅಭಿಪ್ರಾಯಪಟ್ಟಿದ್ದಾರೆ.

ಸೌದಿ ಅರೇಬಿಯಾ ಮೂಲದ ಹಾಗೂ ಮುಸ್ಲಿಂ ವರ್ಲ್ಡ್ ಲೀಗ್ (MWL) ಮುಖ್ಯಸ್ಥ ಅಲ್-ಇಸ್ಸಾ ಅವರು ಭಾರತದಲ್ಲಿ 10 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ನವದೆಹಲಿಯ ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತ ರಾಷ್ಟ್ರವನ್ನು ಬಣ್ಣಿಸಿದ್ದಾರೆ
ನಾವು ಭಾರತೀಯ ಸಮಾಜದಲ್ಲಿನ ವಿವಿಧ ಘಟಕಗಳ ಬಗ್ಗೆ ಮಾತನಾಡಿದ್ದೆವು. ನಾವು ಕಳೆದ ದಿನಗಳಲ್ಲಿ ಅವರೊಂದಿಗೆ ತೊಡಗಿಸಿಕೊಂಡಿದ್ದೇವೆ. ಭಾರತೀಯ ಸಮಾಜದ ಮುಸ್ಲಿಂ ಘಟಕ, ನಾನು ಹೇಳಿದಂತೆ ಅವರು ತಮ್ಮ ಸಂವಿಧಾನದ ಬಗ್ಗೆ ಹೆಮ್ಮೆಪಡುತ್ತಾರೆ. ಅಷ್ಟೇ ಅಲ್ಲ, ಅವರ ರಾಷ್ಟ್ರದ ಬಗ್ಗೆಯೂ ಹೆಮ್ಮೆಪಡುತ್ತಾರೆ. ಭಾರತೀಯ ಸಮಾಜದ ಉಳಿದ ಘಟಕಗಳೊಂದಿಗೆ ಹಂಚಿಕೊಳ್ಳುವ ಸಹೋದರತ್ವದ ಬಗ್ಗೆಯೂ ಅವರಿಗೆ ಖುಷಿಯಿದೆ ಎಂದು ಇಸ್ಸಾ ತಿಳಿಸಿದ್ದಾರೆ.

ನಾವು ಭಾರತೀಯರ ಜ್ಞಾನದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಭಾರತವು ಮಾನವೀಯತೆಗೆ ಅಪಾರ ಕೊಡುಗೆ ನೀಡಿದೆ ಎಂದು ಬಣ್ಣಿಸಿದ್ದಾರೆ. ಇಲ್ಲಿ ಸಹಬಾಳ್ವೆ ಬಹಳ ಮುಖ್ಯ ಎಂದು ನಮಗೆ ತಿಳಿದಿದೆ. ನಾವು ಪ್ರಪಂಚದಾದ್ಯಂತ ಸ್ಥಿರತೆ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಕೆಲಸ ಮಾಡುತ್ತೇವೆ. ಭಾರತೀಯ ಘಟಕವು ತನ್ನ ವೈವಿಧ್ಯತೆಯೊಂದಿಗೆ ಸಹಬಾಳ್ವೆಗೆ ಉತ್ತಮ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಅಲ್-ಇಸ್ಸಾ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದಲ್ಲಿ 10 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.