
ಮೈಸೂರು: ಟಿ. ನರಸೀಪುರದಲ್ಲಿ (T. Narseepur) ಹನುಮ ಜಯಂತಿ (Hanuman Jayanti) ಮೆರವಣಿಗೆ ವೇಳೆ ಗಲಾಟೆ ನಡೆದು ಯುವಬ್ರಿಗೇಡ್ ಕಾರ್ಯಕರ್ತನನ್ನು (Yuva Brigade Activist) ಬಾಟಲಿಯಿಂದ ಇರಿದು ಕೊಂದಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು 6 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಜುಲೈ 8ರಂದು ಟಿ. ನರಸೀಪುರದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆದಿದ್ದು, ದೇವಸ್ಥಾನದ ಬಳಿ ಯಾವ ವಾಹನವನ್ನು ಬಿಡದಂತೆ ತಡೆದಿದ್ದಕ್ಕೆ ಹಾಗೂ ಪುನೀತ್ ರಾಜ್ಕುಮಾರ್ ಫೋಟೋವನ್ನು ತೆಗೆಯಲು ಹೇಳಿದ್ದಕ್ಕೆ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಹಾಗೂ ಆರೋಪಿಗಳ ನಡುವೆ ಜಗಳ ಉಂಟಾಗಿತ್ತು. ವೇಣುಗೋಪಾಲ್ ಯಾವುದೇ ಕಾರಣಕ್ಕೂ ದೇವಸ್ಥಾನದ ಬಳಿ ಬೈಕ್ ನಿಲ್ಲಿಸಲು ಬಿಡುವುದಿಲ್ಲ ಎಂದು ಹೇಳಿದ್ದಕ್ಕೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಗಲಾಟೆ ತೆಗೆದು ಕೊಲೆ ಮಾಡಲಾಗಿದೆ ಎಂಬ ಆರೋಪ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು 6 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮಣಿಕಂಠ, ಸಂದೇಶ್, ಅನಿಲ್, ಶಂಕರ್, ಮಂಜು ಮೇಲೆ ಎಫ್ಐಆರ್ ದಾಖಲಾಗಿದೆ. ಪ್ರಮುಖ ಆರೋಪಿಗಳಾದ ಮಣಿಕಂಠ ಹಾಗೂ ಸಂದೇಶ್ ಬಂಧನವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಸೆರೆಗೆ ತಂಡ ರಚಿಸಲಾಗಿದೆ. ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯ ಕೈವಾಡ ಇಲ್ಲ. ಘಟನಾ ಸ್ಥಳದಲ್ಲಿ ಹ್ಯಾರಿಸ್ ಸರ್ವಿಸ್ ಸೆಂಟರ್ ಇತ್ತು. ಸಹಜವಾಗಿ ಘಟನೆ ನಡೆದಾಗ ಆತನು ಕೂಡಾ ಸ್ಥಳದಲ್ಲಿದ್ದ. ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.