
ವಾಷಿಂಗ್ಟನ್: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ (Meta) ಟ್ವಿಟ್ಟರ್‌ಗೆ (Twitter) ಪೈಪೋಟಿ ನೀಡಲು ತನ್ನದೇ ಆದ ಹೊಸ ಅಪ್ಲಿಕೇಶನ್ ‘ಥ್ರೆಡ್ಸ್’ (Threads) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೀಗ ಬಳಕೆದಾರರು ಈ ಹೊಸ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
ಥ್ರೆಡ್ಸ್ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಇದನ್ನು ಬಿಡುಗಡೆ ಮಾಡಿದ ಕೇವಲ 2 ಗಂಟೆಗಳಲ್ಲಿ 20 ಲಕ್ಷ ಜನರು ಸೈನ್ ಅಪ್ ಆಗಿದ್ದು, 4 ಗಂಟೆಗಳಲ್ಲಿ 50 ಲಕ್ಷ ಬಳಕೆದಾರರು ಸೈನ್ ಅಪ್ ಮಾಡಿದ್ದಾರೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ತಿಳಿಸಿದ್ದಾರೆ.

ಎಲೋನ್ ಮಸ್ಕ್‌ನ (Elon Musk) ಟ್ವಿಟ್ಟರ್‌ಗೆ ಠಕ್ಕರ್ ನೀಡಲು ಮುಂದಾಗಿರುವ ಜುಕರ್‌ಬರ್ಗ್ ಥ್ರೆಡ್ಸ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ನಡುವೆ ಥ್ರೆಡ್ಸ್ ಟ್ವಿಟ್ಟರ್ ಅನ್ನು ಹಿಂದಿಕ್ಕಬಹುದು ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಜುಕರ್‌ಬರ್ಗ್, ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಸಾಧಿಸಲು 100 ಕೋಟಿಗೂ ಅಧಿಕ ಬಳಕೆದಾರರು ಬೇಕು ಹಾಗೂ ಸಾರ್ವಜನಿಕ ಸಂಭಾಷಣೆಗೆ ಅಪ್ಲಿಕೇಶನ್ ಅನ್ನು ಮುಕ್ತಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ. ಟ್ವಿಟ್ಟರ್‌ಗೆ ಇದನ್ನು ಸಾಧಿಸೋ ಸಾಮರ್ಥ್ಯ ಇದೆ ಆದರೆ ಅದು ಗುರಿ ತಲುಪಿಲ್ಲ. ಈಗ ನಮ್ಮ ಬಳಿ ಆ ಅವಕಾಶವಿದೆ ಎಂದಿದ್ದಾರೆ.

ಜುಕರ್‌ಬರ್ಗ್ ಈ ಮೊದಲು ಥ್ರೆಡ್ಸ್ ಸಂಭಾಷಣೆಗೆ ಮುಕ್ತ ಹಾಗೂ ಸ್ನೇಹಪರ ಸಾರ್ವಜನಕರಿಗಾಗಿರೋ ಒಂದು ಮಾಧ್ಯಮ ಎಂದು ಪರಿಚಯಿಸಿದ್ದರು. ಇದು ಇನ್‌ಸ್ಟಾಗ್ರಾಮ್‌ನ ಅತ್ಯುತ್ತಮ ಭಾಗವಾಗಲಿದ್ದು, ಬಳಕೆದಾರರಿಗೆ ಹೊಸ ಅನುಭವ ಸೃಷ್ಟಿಸುವ ಕಲ್ಪನೆಯಿದೆ ಎಂದಿದ್ದರು.

11 ವರ್ಷಗಳಲ್ಲೇ ಮೊದಲು ಜುಕರ್‌ಬರ್ಗ್ ಟ್ವೀಟ್:
ಕುತೂಹಲಕಾರಿ ಅಂಶವೆಂದರೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ 11 ವರ್ಷಗಳ ನಂತರ ಮೊದಲ ಬಾರಿ ಒಂದು ಮೀಮ್ ಅನ್ನು ಟ್ವೀಟ್ ಮಾಡಿದ್ದಾರೆ. ಥ್ರೆಡ್ಸ್ ಅನ್ನು ಅನಾವರಣಗೊಳಿಸಿದ ಬಳಿಕ ಜುಕರ್‌ಬರ್ಗ್ ಎಲೋನ್ ಮಸ್ಕ್‌ಗೆ ಸವಾಲು ಎಸೆಯುವಂತಹ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.