
ಬೆಳಗಾವಿ: ಪೊಲೀಸರ ಎದುರೇ ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ವಿದ್ಯಾರ್ಥಿಗಳ (Students) 2 ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು ಘಟನೆಯಲ್ಲಿ ಜಗಳ ಬಿಡಿಸಲು ಹೋದ ಎಸ್‌ಐ ಒಬ್ಬರ ಮೂಗಿಗೆ ಗಾಯವಾಗಿರುವ ಘಟನೆ ರಾಮದುರ್ಗ (Ramadurga) ಪಟ್ಟಣದಲ್ಲಿ ನಡೆದಿದೆ.

ರಾಮದುರ್ಗ ಪಟ್ಟಣದ ಶಾಲೆಯೊಂದರ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಕಬಡ್ಡಿ ಆಟದ ಅಭ್ಯಾಸದ ವೇಳೆ 2 ಗುಂಪುಗಳ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಆಗಿದೆ. ಎರಡೂ ಗುಂಪುಗಳ ಮಕ್ಕಳನ್ನು ಸಮಾಧಾನ ಮಾಡಿ ಶಿಕ್ಷಕರು ಕಳುಹಿಸಿದ್ದಾರೆ. ಆದರೆ ರಾಮದುರ್ಗ ಬಸ್ ನಿಲ್ದಾಣದಲ್ಲಿಯೂ ವಿದ್ಯಾರ್ಥಿಗಳು ಬಡಿದಾಡಿಕೊಂಡಿದ್ದಾರೆ.

ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ರಾಮದುರ್ಗ ಪೊಲೀಸರು ಆಗಮಿಸಿದ್ದಾರೆ. ಪೊಲೀಸರ ಎದುರೇ ಹುಡುಗರ ಫೈಟ್ ನಡೆದಿದ್ದು ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಹೈರಾಣಾಗಿದ್ದಾರೆ. ಹೊಡೆದಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸುವಾಗ ಎಸ್‌ಐ ಮೂಗಿಗೆ ಗಾಯವಾಗಿದೆ. ಬಳಿಕ ಎರಡೂ ಗುಂಪುಗಳ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

