
ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shindhe) ಸರ್ಕಾರದಲ್ಲಿ ಡಿಸಿಎಂ ಪಟ್ಟ ಅಲಂಕರಿಸಿರುವ ಅಜಿತ್ ಪವಾರ್ (AjitPawar) ವಿರುದ್ಧ ಸ್ಪೀಕರ್ ರಾಹುಲ್ ನಾರ್ವೇಕರ್ ಗೆ ಅನರ್ಹತೆ ಅರ್ಜಿ ಸಲ್ಲಿಕೆಯಾಗಿದೆ.
ಅಜಿತ್ ಪವಾರ್ ಹಾಗೂ 9 ಶಾಸಕರ ವಿರುದ್ಧ ಎನ್ಸಿಪಿ ಪಕ್ಷವು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ ಅರ್ಜಿ ಸಲ್ಲಿಸಿದೆ ಎಂದು ಮಹಾರಾಷ್ಟ್ರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಯಂತ್ ಪಾಟೀಲ್ ತಿಳಿಸಿದ್ದಾರೆ

ಅಜಿತ್ ಪವಾರ್ ಹಾಗೂ 9 ಮಂದಿ ಶಾಸಕರ ನಡೆಯು ಕಾನೂನುಬಾಹಿರವಾಗಿದೆ. ಅಲ್ಲದೆ ಅವರು ಶರದ್ ಪವಾರ್ ಮತ್ತು ಪಕ್ಷವನ್ನು ಕತ್ತಲೆಯಲ್ಲಿಟ್ಟಿದ್ದರಿಂದ ಜಯಪ್ರಕಾಶ್ ದಂಡೆಗಾಂವ್ಕರ್ ನೇತೃತ್ವದ ಪಕ್ಷದ ಶಿಸ್ತು ಸಮಿತಿಗೆ ದೂರು ನೀಡಲಾಗಿದೆ. ಶಿಸ್ತು ಸಮಿತಿಯ ಶಿಫಾರಸ್ಸಿನ ನಂತರ ಅಜಿತ್ ಪವಾರ್ ಸೇರಿದಂತೆ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು ಎನ್ಸಿಪಿಯು (NCP) ರಾಜ್ಯ ಶಾಸಕಾಂಗಕ್ಕೆ ಇ-ಮೇಲ್ ಮಾಡಿದೆ ಎಂದು ಅವರು ವಿವರಿಸಿದ್ದಾರೆ.

ಉದ್ಧವ್ ಠಾಕ್ರೆ ಅವರ ಒಂದು ನಿರ್ಧಾರಿಂದ ಮಹಾರಾಷ್ಟ್ರದಲ್ಲಿ ಈಗ ಟ್ರಿಪಲ್ ಎಂಜಿನ್ ಸರ್ಕಾರ ಬಂದಿದೆ. ದೇಶದಲ್ಲಿ ಮೋದಿಯನ್ನು ಸೊಲಿಸಲು ವಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪಕ್ಷವೇ ಈಗ ಇಬ್ಭಾಗವಾಗಿದೆ. ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಆಡಳಿತ ಪಕ್ಷವನ್ನು ಬೆಂಬಲಿಸಿ ಡಿಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ.
