
ಬಾಗಲಕೋಟೆ: ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ʻ7 ಸ್ಟಾರ್ ಸುಲ್ತಾನ್ ಖಾನ್ʼ ಎಂಬ ಟಗರನ್ನ (Tagaru) ಕುರ್ಬಾನಿಗೆ ಮಾಡಲು ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಬಾಗಲಕೋಟೆ (Bagalkote) ತಾಲೂಕಿನ ಸುತಗುಂಡಾರ್ ಗ್ರಾಮದ ಯುನೀಸ್ ಗಡೇದ್ ಎಂಬ ವ್ಯಕ್ತಿ, ಬಕ್ರೀದ್ ಹಬ್ಬಕ್ಕೆ (Bakrid Festival) ಕುರ್ಬಾನಿಗಾಗಿ ಎರಡೂವರೆ ವರ್ಷದ ಹಿಂದೆ ರಾಂಪುರ್ ಗ್ರಾಮದ ಬಸು ಎಂಬುವರಿಂದ 1.88 ಲಕ್ಷ ರೂ. ನೀಡಿ ಈ ಟಗರನ್ನ ಖರೀದಿಸಿದ್ದರು. ಆದ್ರೆ ಕುರ್ಬಾನಿ ಕೊಡೋ ಮುನ್ನ ಆ ಟಗರನ್ನ ಕಾಳಗಕ್ಕೆ ಇಳಿಸಿದ್ದರು. ಕಾಳಗದಲ್ಲಿ ಟಗರು ಜಯಭೇರಿ ಬಾರಿಸಿತ್ತು.

ಆ ನಂತರ ಯುನೀಸ್ ಎಲ್ಲ ಕಾಳಗಗಳಿಗೂ ಟಗರನ್ನ ಇಳಿಸಲು ಮುಂದಾರು. ಟಗರು ಹೋದಲೆಲ್ಲಾ ಜಯಭೇರಿ ಬಾರಿಸುತ್ತಾ ತನ್ನದೇ ಅಭಿಮಾನಿ ವರ್ಗವನ್ನ ಸೃಷ್ಟಿಸಿಕೊಂಡಿತು. ಆದ್ದರಿಂದ ಮಾಲೀಕ ಯುನೀಸ್ ಈ ಟಗರಿಗೆ ಪ್ರೀತಿಯಿಂದ ʻ7 ಸ್ಟಾರ್ ಸುಲ್ತಾನ್ʼ ಎಂಬ ಹೆಸರನ್ನಿಟ್ಟರು. ಇಲ್ಲಿಯ ವರೆಗೆ ಈ ಸೆವನ್ ಸ್ಟಾರ್ ಸುಲ್ತಾನ್ ಟಗರು 34 ಕಾಳಗದಲ್ಲಿ ಜಯ ಸಾಧಿಸಿ, 20 ಲಕ್ಷಕ್ಕೂ ಹೆಚ್ಚು ಹಣವನ್ನ ಸಂಪಾದಿಸಿಕೊಟ್ಟಿದೆ. ಅಷ್ಟು ಸಾಲದೆಂಬಂತೆ 3 ಎಚ್‌ಎಫ್ ಡೀಲಕ್ಸ್ ಬೈಕ್ ಇನ್ನೂ ಅನೇಕ ಬಹುಮಾನಗಳನ್ನ ಗೆದ್ದುಕೊಟ್ಟಿದೆ.

ಅಲ್ಲದೇ ತೆರೆ ಕಾಣದ ಡಾಲಿ ಧನಂಜಯ್ ಅಭಿನಯದ ʻಟಗರು ಪಲ್ಯʼ ಚಿತ್ರದಲ್ಲಿ ಅಭಿನಯಿಸಿ, ಈ ಸೆವನ್ ಸ್ಟಾರ್ ಸುಲ್ತಾನ್ ಮತ್ತಷ್ಟು ಸುದ್ದಿಯಾಗಿತ್ತು. ಇದೀಗ ಯುನೀಸ್ ಗಡೇದ್ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಟಗರನ್ನ ಕುರ್ಬಾನಿ ಮಾಡಲು ನಿರ್ಧರಿಸಿದ್ದಾರೆ. ಇದು ಸುಲ್ತಾನ್ ಟಗರು ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೀಗಾಗಿ ಈ ಸುಲ್ತಾನ್ ಅಭಿಮಾನಿಗಳು ಸಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ಟಗರನ್ನ ಕುರ್ಬಾನಿ ಮಾಡದಂತೆ ಮನವಿ ಮಾಡುವ ಅಭಿಯಾನ ಶುರುಮಾಡಿಕೊಂಡಿದ್ದಾರೆ

