
ಮಲತಾಯಿ ಧೋರಣೆ ಮಾಡುವುದಾದರೆ ಕೇಂದ್ರದ ನೀತಿ, ನಿರ್ಧಾರಗಳನ್ನು ನಾವ್ಯಾಕೆ ಒಪ್ಪಬೇಕು. ಕರ್ನಾಟಕದಿಂದ ಪಡೆದಿರುವ ಎಲ್ಲ ಜಿಎಸ್ಟಿಯನ್ನೂ ವಾಪಸ್ ಕೊಟ್ಟು ಒಕ್ಕೂಟ ವ್ಯವಸ್ಥೆಯಿಂದ ಕೈಬಿಡಲಿ: ಶಿವಲಿಂಗೇಗೌಡ
ಬೆಂಗಳೂರು(ಜೂ.17): ಭಾರತೀಯ ಆಹಾರ ನಿಗಮದಿಂದ ಅಕ್ಕಿ ಖರೀದಿಸಲು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದಾದರೆ ಒಕ್ಕೂಟ ವ್ಯವಸ್ಥೆಯಿಂದ ಕರ್ನಾಟಕವನ್ನು ಕೈಬಿಡಲಿ. ರಾಜ್ಯದ ಕ್ಷೇಮಾಭಿವೃದ್ಧಿಗೆ ಕೇಂದ್ರ ಸ್ಪಂದಿಸದ ಮೇಲೆ ಜಿಎಸ್ಟಿ ಪದ್ಧತಿಯನ್ನೂ ನಾವ್ಯಾಕೆ ಒಪ್ಪಬೇಕು? ಎಂದು ಶಾಸಕ ಶಿವಲಿಂಗೇಗೌಡ ಕಿಡಿ ಕಾರಿದ್ದಾರೆ

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಕ್ಕೂಟ ವ್ಯವಸ್ಥೆಯಲ್ಲಿ ಎಫ್ಸಿಐ ಮೂಲಕ ಅಕ್ಕಿ ಖರೀದಿಗೆ ಒಂದು ರಾಜ್ಯಕ್ಕೆ ಅವಕಾಶ ನೀಡುವುದು ಮತ್ತೊಂದಕ್ಕೆ ನಿರಾಕರಿಸುವ ಕೇಂದ್ರದ ನೀತಿ ಸರಿಯಲ್ಲ. 7 ಲಕ್ಷ ಟನ್ ಅಕ್ಕಿ ಇದೆ ಅಂತ ರಾತ್ರಿ ಹೇಳಿ, ಬೆಳಗ್ಗೆ ಇಲ್ಲ ಕೊಡೋಕಾಗಲ್ಲ ಅಂದರೆ ಹೇಗೆ? ಈ ಬಗ್ಗೆ ತನಿಖೆ ಮಾಡಿಸ್ತಾರಾ? ಹೀಗೆ ಮಾಡಿದರೆ ಆಹಾರ ಭದ್ರತಾ ಕಾಯ್ದೆ ತಂದ ಉದ್ದೇಶ ಈಡೇರುತ್ತಾ? ಈ ರೀತಿ ಮಲತಾಯಿ ಧೋರಣೆ ಮಾಡುವುದಾದರೆ ಕೇಂದ್ರದ ನೀತಿ, ನಿರ್ಧಾರಗಳನ್ನು ನಾವ್ಯಾಕೆ ಒಪ್ಪಬೇಕು. ಕರ್ನಾಟಕದಿಂದ ಪಡೆದಿರುವ ಎಲ್ಲ ಜಿಎಸ್ಟಿಯನ್ನೂ ವಾಪಸ್ ಕೊಟ್ಟು ಒಕ್ಕೂಟ ವ್ಯವಸ್ಥೆಯಿಂದ ಕೈಬಿಡಲಿ’ ಎಂದರು.

ಅನ್ನಭಾಗ್ಯ ಇದು ಜನಪರ ಕಾರ್ಯಕ್ರಮ, ಇದರಲ್ಲಿ ರಾಜಕೀಯ ಮಾಡಿದರೆ ಬಿಜೆಪಿಯವರು ಈಗ ವಿಧಾನಸಭೆ ಚುನಾವಣೆಯಲ್ಲಿ ಪಾಠ ಕಲಿಸಿದಂತೆ ಸಂಸತ್ ಚುನಾವಣೆಯಲ್ಲೂ ಜನ ಪಾಠ ಕಲಿಸುತ್ತಾರೆ. ನಾವೇನೂ ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಳುತ್ತಿಲ್ಲ. ಎಫ್ಸಿಐ ಇರೋದ್ರಿಂದಲೇ ಖರೀದಿಸಿ ಕೊಡಬಹುದು ಎಂದು 10 ಕೆ.ಜಿ. ಅಕ್ಕಿ ಕೊಡ್ತೀವಿ ಅಂತ ಘೋಷಣೆ ಮಾಡಿದ್ದು. ಅವರು ಏನೇ ಮಾಡಿದರೂ ನಮ್ಮ ಸರ್ಕಾರ ಹೊರ ರಾಜ್ಯಗಳಿಂದಲಾದರೂ ಅಕ್ಕಿ ಖರೀದಿಸಿ ನೀಡುತ್ತದೆ’ ಎಂದರು.