
ಬೆಂಗಳೂರು (ಜೂ.16): ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ಕಳೆದ ವರ್ಷ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪಾದಯಾತ್ರೆ ವೇಳೆ ಕೊರೋನಾ ನಿಯಮಗಳ ಉಲ್ಲಂಘಿಸಿದ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುವಿಕೆ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಇದ್ದ ಎಲ್ಲಾ ಪ್ರಕರಣವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಶುಕ್ರವಾರ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಪೀಠ ಎಲ್ಲ ಐದು ಪ್ರಕರಣಗಳನ್ನು ವಜಾಗೊಳಿಸಿದೆ. 2022ರ ಜನವರಿಯಲ್ಲಿ ಕಾಂಗ್ರೆಸ್‌ನ ‘ಮೇಕೆದಾಟು ಪಾದಯಾತ್ರೆ’ಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಿವಕುಮಾರ್ ವಿರುದ್ಧ ಐದು ದೂರುಗಳನ್ನು ದಾಖಲಿಸಲಾಗಿತ್ತು.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ದೂರು ರದ್ದು ಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಕಳೆದ ಶುಕ್ರವಾರ, ಹೈಕೋರ್ಟ್ ಅವರ ವಿರುದ್ಧದ ಒಂದು ಪ್ರಕರಣವನ್ನು ರದ್ದುಗೊಳಿಸಿತು. ಶಿವಕುಮಾರ್ ವಿರುದ್ಧ ಕನಕಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತಡೆ ನೀಡಿ ವಿಚಾರಣೆಯನ್ನು ಈ ಶುಕ್ರವಾರಕ್ಕೆ ಮುಂದೂಡಿದ್ದರು.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು 2022ರ ಜ.9ರಿಂದ 10 ದಿನ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಲ್ಲದೆ, ಸಾಂಕ್ರಾಮಿಕ ರೋಗ ಹರಡಲು ಕಾರಣವಾದ ಆರೋಪದ ಮೇಲೆ ನೈಸರ್ಗಿಕ ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಡಿ.ಕೆ. ಶಿವಕುಮಾರ್ ವಿರುದ್ಧ ಉಪ್ಪಾರಪೇಟೆ, ಹಲಸೂರು ಗೇಟ್ ಮತ್ತು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಈ ಎಲ್ಲ ದೂರುಗಳನ್ನು ರದ್ದುಪಡಿಸುವಂತೆ ಕೋರಿ ಡಿ.ಕೆ. ಶಿವಕುಮಾರ್ ಹೈಕೋರ್ಚ್ ಮೊರೆ ಹೋಗಿದ್ದರು. ಡಿ.ಕೆ. ಶಿವಕುಮಾರ್ ಪರವಾಗಿ ವಕೀಲ ಅರ್ನವ್ ಬಗಲವಾಡಿ ವಾದ ಮಂಡಿಸಿದ್ದರು.