ಅಶ್ರಫ್ ಕಮ್ಮಾಜೆ |
Updated on:Jun 15, 2023 | 1:43 PM

ನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಲು ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭವಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ನೈತಿಕ ಪೊಲೀಸ್ಗಿರಿಗೆ(moral policing) ಕಡಿವಾಣ ಹಾಕಲು ನಿರ್ಧಾರ ಮಾಡಿದೆ. ಅದರಂತೆ ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ (anti communal wing ) ಕಾರ್ಯಾರಂಭವಾಗಿದೆ. ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದು, ಸಿಎಸ್ವಿ ಇನ್ಸ್ಪೆಕ್ಟರ್ ಸೇರಿದಂತೆ ಐವರು ಸಿಬ್ಬಂದಿಯೊಂದಿಗೆ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭಿಸಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರದ ವಿಶೇಷ ಘಟಕದ (ಸಿಎಸ್ಬಿ) ಪೊಲೀಸ್ ನಿರೀಕ್ಷಕರು ಗೂ ಸಿಬ್ಬಂದಿ “ಆ್ಯಂಟಿ ಕಮ್ಯುನಲ್ ವಿಂಗ್” ನ ಸದಸ್ಯರಾಗಿರುತ್ತಾರೆ. ನೈತಿಕ ಪೊಲೀಸ್ಗಿರಿ ಪ್ರಕರಣಗಳನ್ನು ಹಾಗೂ ಕೋಮು ಗಲಭೆಗಳನ್ನು ತಡೆಗಟ್ಟಲು ಆ್ಯಂಟಿ ಕಮ್ಯುನಲ್ ವಿಂಗ್ ರಚನೆ ಮಾಡಲಾಗಿದೆ.
ಇನ್ನು ಈ ಬಗ್ಗೆ ಕುಲದೀಪ್ ಕುಮಾರ್ ಜೈನ್ ಪ್ರತಿಕ್ರಿಯಿಸಿದ್ದು, ಮಂಗಳೂರು ನಗರದ ಸಿಸಿಬಿ ಎಸಿಪಿ ಉಸ್ತುವಾರಿಯಲ್ಲಿ “ಆ್ಯಂಟಿ ಕಮ್ಯುನಲ್ ವಿಂಗ್” ತಂಡ ರಚನೆ ಮಾಡಲಾಗಿದ್ದು, ನಗರದಲ್ಲಿ ನಡೆಯಬಹುದಾದ ನೈತಿಕ ಪೊಲೀಸ್ಗಿರಿ ಸಮಸ್ಯೆಯನ್ನು ನಿಭಾಯಿಸುವುದು ಇದರ ಕರ್ತವ್ಯವಾಗಿದೆ. ಈ ಹಿಂದೆ ವರದಿಯಾಗಿರುವ ಕೋಮು ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ಕೊಲೆ, ಕೊಲೆ ಪ್ರಯತ್ನ, ದೊಂಬಿ ಪ್ರಕರಣಗಳು. ನೈತಿಕ ಪೊಲೀಸ್ಗಿರಿ ಮತ್ತು ಗೋವುಗಳ ಕಳ್ಳತನ, ಅಕ್ರಮ ಗೋ-ಸಾಗಾಟ, ಗೋ-ವಧೆ ಮುಂತಾದ ಪ್ರಕರಣಗಳನ್ನು ಈ ವಿಂಗ್ ಪರಿಶೀಲನೆ ನಡೆಸಲಿದೆ. ಅವುಗಳಲ್ಲಿನ ಆರೋಪಿತರುಗಳ ಚಲನವಲನಗಳ ಬಗ್ಗೆ ಪ್ರತಿನಿತ್ಯ ನಿಗಾವಹಿಸುವುದು. ಅವರುಗಳ ವಿರುದ್ಧ ಭದ್ರತಾ ಕಾಯ್ದೆಯಡಿ ಮುಚ್ಚಳಿಕೆ ಪಡೆದುಕೊಳ್ಳುವುದು. ಕೋಮು ವಿಚಾರಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಿಸುತ್ತಿರುವ ಎಲ್ಲಾ ಸಂಘಟನೆಗಳ ಬಗ್ಗೆ ಮಾಹಿತಿಯನ್ನ ಆ್ಯಂಟಿ ಕಮ್ಯುನಲ್ ವಿಂಗ್ ಸಂಗ್ರಹ ಮಾಡಲಿದೆ ಎಂದು ಮಾಹಿತಿ ನೀಡಿದರು.

ಯಾವುದೇ ಧರ್ಮದ ಸಂಘಟನೆಗಳು ಹಾಗೂ ಗುಂಪುಗಳು ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದರು.

ಕೋಮು ಆಧಾರಿತ ನೈತಿಕ ಪೊಲೀಸ್ ಗಿರಿಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಈ ಹಿಂದೆ ಸ್ವತಃ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದರು. ಮಂಗಳೂರು ಭೇಟಿ ವೇಳೆ ಮಾತನಾಡಿದ್ದ ಪರಮೇಶ್ವರ್, ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನೂತನ ಪಡೆಯಾದ ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸುವ ಅಗತ್ಯವಿದೆ ಎಂದಿದ್ದರು. ಆದರೆ ಇದು ರಾಜ್ಯಾದ್ಯಂತ ಅಥವಾ ಇತರ ಕೋಮು ಸೂಕ್ಷ್ಮ ಜಿಲ್ಲೆಗಳಲ್ಲಿ ಕೂಡಾ ಆರಂಭ ಮಾಡಲಾಗುತ್ತಾ ಎಂಬುವುದರ ಕುರಿತಾಗಿ ಯಾವುದೇ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.