
ಶಿವಮೊಗ್ಗ: ವಿದ್ಯುತ್ ದರ ಏರಿಕೆ (Electricity Bill Hike) ಖಂಡಿಸಿ ಶಿವಮೊಗ್ಗದಲ್ಲಿ (Shivamogga) ಇಂದು ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ (Protest) ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ.ನಗರದ ಮೆಸ್ಕಾಂ (MESCOM) ಕಚೇರಿ ಎದುರು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಮೆಸ್ಕಾಂ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಹರಸಾಹಸ ಪಟ್ಟರು.
ಈ ವೇಳೆ ಓರ್ವ ಕಾರ್ಯಕರ್ತ ಪೊಲೀಸರ ಕಣ್ತಪ್ಪಿಸಿ ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಕಚೇರಿಯ ಗಾಜು ಪುಡಿ ಪುಡಿ ಮಾಡಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮೆಸ್ಕಾಂ ಕಚೇರಿಯ ಗಾಜು ಒಡೆದಿದ್ದಕ್ಕೆ ಕಾರ್ಯಕರ್ತನ ವಿರುದ್ದ ದೂರು ನೀಡಲು ಮೆಸ್ಕಾಂ ಅಧಿಕಾರಿಗಳು ನಿರ್ಧರಿಸಿದ್ದಾರೆ.
