
ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸ್ವಪಕ್ಷೀಯ ಸರ್ಕಾರ ಇದ್ದಾಗ ನಡೆದುಕೊಂಡ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ (Congress) ಸರ್ಕಾರದ ನಡವಳಿಕೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ ವಿರುದ್ದ ರೀ ಡೂ, ಅರ್ಕಾವತಿ ಡಿ ನೋಟಿಫೀಕೇಷ್, ಕೆಂಪಣ್ಣ ಆಯೋಗ ವರದಿ ಅಬ್ಬರಿಸುತ್ತಿತ್ತು. ಆದರೆ ನಮ್ಮವರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ ಎಂದು ಸ್ವಪಕ್ಷೀಯರ ವಿರುದ್ದವೇ ಹರಿಹಾಯ್ದರು.

ಸಿದ್ದರಾಮಯ್ಯ ಕೂಡ ಬಿಜೆಪಿ ಮೇಲೆ ಪಿಎಸ್ಐ ಹಗರಣ, ಬಿಟ್ ಕಾಯಿನ್ ಅಂತಾ ಅಬ್ಬರಿಸುತ್ತಿದ್ದರು. ಈಗ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ಅವರೆ, ನಿಗಮ ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲ ಅಂದರೆ, ನೀವು ಮಾಡ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದು ಆಗ್ರಹಿಸಿದರು.
ನಿಮ್ಮ ವಿರುದ್ಧ ಅವರು, ಅವರ ವಿರುದ್ಧ ನೀವು ಸಮಯ ಬಂದಾಗ ಮಾತ್ರ ಟೀಕೆ ಮಾಡಿಕೊಳ್ತಿರಾ? ನನಗೆ ತುರಿಕೆ ಆದಾಗ ನೀನು ನನ್ನ ಬೆನ್ನು ಕೆರಿ, ನಿನಗೆ ತುರಿಕೆ ಆದಾಗ ನಾನು ಬೆನ್ನು ಕೆರಿತೀನಿ ಅನ್ನೋ ರೀತಿ ನಿಮ್ಮ ಒಪ್ಪಂದವೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರೇ, ನಿಮ್ಮ ಬಗ್ಗೆ ಬಿಜೆಪಿಯ ಕೆಲವು ಅತಿರಥ ಮಹಾರಥರು ಮಾತಾಡದೆ ಇರಬಹದು. ಕೆಲವರು ಶಾಮೀಲು ಆಗಿರಬಹುದು. ಆದರೆ ಬಿಜೆಪಿ ಕಾರ್ಯಕರ್ತ ಯಾವತ್ತೂ ನಿಮ್ಮ ಜೊತೆ ಶಾಮೀಲು ಆಗಿಲ್ಲ. ಆಗುವುದೂ ಇಲ್ಲ. ಚುನಾವಣೆಯಲ್ಲಿ ಬಿಜೆಪಿಯ ಕೆಲವು ಮುಖಂಡರು ಸೋತಿರಬಹುದು. ನಮ್ಮ ಕಾರ್ಯಕರ್ತರು ಸೋತಿಲ್ಲ ಎಂದು ಟಾಂಗ್ ಕೊಟ್ಟರು.

ವಿದ್ಯುತ್ ಬಿಲ್ನ್ನು ಯದತದ್ವ ಏರಿಕೆ ಮಾಡಿ ಈ ಮೂಲಕ ಒಂದಷ್ಟು ಜನರ ದರೋಡೆ ಮಾಡಿ, ಇನ್ನೊಬ್ಬರಿಗೆ ಕೊಡುವ ನಿಮ್ಮ ನಾಟಕದ ವಿರುದ್ದ ಜನಾಂದೋಲನ ಮಾಡುತ್ತೇವೆ ಎಂದು ಎಚ್ಚರಿಸಿದರು.
